ಕಾರವಾರ(ಉತ್ತರಕನ್ನಡ): ತಾಲೂಕಿನ ಅಲಿಗದ್ದಾ ಗೌಡವಾಡಾದಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದ ಬೆಂಕಿ ದುರಂತದಲ್ಲಿ ಮನೆಯೊಂದರಲ್ಲಿದ್ದ ಚಿನ್ನಾಭರಣ ಸೇರಿ ದಾಖಲೆಗಳು ಸುಟ್ಟು ಕರಕಲಾಗಿವೆ. ಭೀಮ ಗೌಡ ಅವರಿಗೆ ಸೇರಿದ ಮನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಅವಘಡ ಸಂಭವಿಸಿದೆ.
ಬೆಳಿಗ್ಗೆ ಮನೆಗೆ ಬೀಗ ಹಾಕಿ ಕುಟುಂಬದವರು ಹೊರಗಡೆ ತೆರಳಿದ್ದ ಸಂದರ್ಭದಲ್ಲಿ ಮದ್ಯದ ಕೋಣೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಅಕ್ಕಪಕ್ಕದವರಿಗೂ ಗೊತ್ತಾಗಿರಲಿಲ್ಲ. ನಂತರ ಬೆಂಕಿ ದೊಡ್ಡದಾಗಿ ಉರಿಯಲು ಆರಂಭಿಸಿದಾಗ ಜ್ವಾಲೆ ಕಂಡು ಆತಂಕಗೊಂಡ ಸ್ಥಳೀಯರು ಮನೆಯ ಬೀಗ ಒಡೆದು ಬೆಂಕಿ ನಂದಿಸಲು ಮುಂದಾಗಿದ್ದಾರೆ. ಆದರೆ ಬೆಂಕಿ ತೀವ್ರವಾಗಿ ವ್ಯಾಪಿಸಿದ ಕಾರಣ ಬೆಂಕಿ ನಿಯಂತ್ರಿಸಲಾಗದೇ ನಿವಾಸಿಗಳು ಹತ್ತಿರದಲ್ಲಿದ್ದ ಎಂಎಂಸಿಎಲ್ ಕಂಪನಿಯಿಂದ ಪೈಪ್ ಮೂಲಕ ನೀರು ಹಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆದರೆ ಅಷ್ಟರಲ್ಲಾಗದೇ ಮದ್ಯದ ಕೋಣೆಯಲ್ಲಿದ್ದ ಕಪಾಟಿನಲ್ಲಿನ ಚಿನ್ನಾಭರಣ ಕರಗಿಹೋಗಿದ್ದು, ಬಟ್ಟೆ, ದಾಖಲೆಗಳು, ಅಟ್ಟದ ಮೇಲಿದ್ದ ವಸ್ತುಗಳು ಹಾಗೂ ಮೇಲ್ಛಾವಣಿ ಸಂಪೂರ್ಣ ಸುಟ್ಟು ಕರಕಲಾಗಿವೆ. ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಮೇಲ್ನೋಟಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿರಬಹುದೆಂದು ಶಂಕಿಸಲಾಗಿದ್ದು, ಸ್ಥಳಕ್ಕೆ ಧಾವಿಸಿದ್ದ ಅಗ್ನಿಶಾಮಕ ದಳ ಸಿಬ್ಬಂದಿ ಮಾಹಿತಿ ಕಲೆಹಾಕಿದ್ದಾರೆ.






