ದಾವಣಗೆರೆ: ಆಭರಣ ತಯಾರಕರೊಬ್ಬರ ಬಳಿ ದರೋಡೆ ಮಾಡಿದ ಆರೋಪದ ಮೇಲೆ ಬಂಧಿತರಾಗಿದ್ದ ಇಬ್ಬರು ಪ್ರೊಬೇಷನರಿ ಪಿಎಸ್‌ಐಗಳ (PSI) ವಿರುದ್ಧ ದಾವಣಗೆರೆ ಪೂರ್ವ ವಲಯದ ಐಜಿಪಿ (IGP) ಬಿ.ಆರ್. ರವಿಕಾಂತೇಗೌಡ (B.R. Ravikanthe Gowda) ಅವರು ಕಠಿಣ ಕ್ರಮ ಕೈಗೊಂಡಿದ್ದಾರೆ. ಸಾರ್ವಜನಿಕರಿಗೆ ರಕ್ಷಣೆ ನೀಡಬೇಕಿದ್ದ ಪಿಎಸ್‌ಐಗಳೇ (Police Sub-Inspectors) ಈ ರೀತಿ ಕೃತ್ಯ ಎಸಗಿದ ಹಿನ್ನೆಲೆಯಲ್ಲಿ ಇಬ್ಬರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.
ಎ1 ಆರೋಪಿಯಾದ ಪಿಎಸ್‌ಐ ಮಾಳಪ್ಪ ಚಿಪ್ಪಲಕಟ್ಟಿಯನ್ನು ಸೇವೆಯಿಂದ ವಜಾ (Dismissed) ಮಾಡಲಾಗಿದೆ. ಈತ ಹಾವೇರಿ ಜಿಲ್ಲೆಯ ಹಂಸಭಾವಿ ಠಾಣೆಯಲ್ಲಿ ಪ್ರೊಬೇಷನರಿ ಪಿಎಸ್‌ಐ ಆಗಿದ್ದರು ಮತ್ತು ಇತ್ತೀಚೆಗೆ ವರ್ಗಾವಣೆಗೊಂಡು ಸ್ಥಳ ನಿರೀಕ್ಷೆಯಲ್ಲಿದ್ದರು. ಎ-2 ಆರೋಪಿ ಪಿಎಸ್‌ಐ ಪ್ರವೀಣಕುಮಾರ್ ಅವರನ್ನು ಸೇವೆಯಿಂದ ಅಮಾನತು (Suspended) ಮಾಡಿ, ಇಲಾಖೆ ವಿಚಾರಣೆಗೂ ಆದೇಶಿಸಲಾಗಿದೆ.
ಪ್ರಕರಣದ ಹಿನ್ನಲೆ
ನವೆಂಬರ್ 24ರ ಮಧ್ಯರಾತ್ರಿ ಇಬ್ಬರು ಪಿಎಸ್‌ಐಗಳು ಮೂವರು ಸಾಮಾನ್ಯ ಆರೋಪಿಗಳೊಂದಿಗೆ ಸೇರಿ ಕಾರವಾರ ಮೂಲದ ಆಭರಣ ತಯಾರಕ ವಿಶ್ವನಾಥ್ ಅವರ ಬಳಿ 78.15 ಗ್ರಾಂ ಚಿನ್ನದ ಗಟ್ಟಿ (78.15 grams of gold biscuits) ಮತ್ತು ಚಿನ್ನಾಭರಣಗಳನ್ನು ದರೋಡೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪಿಎಸ್‌ಐಗಳು ಸೇರಿ ಒಟ್ಟು 7 ಜನರನ್ನು ಪೊಲೀಸರು ಬಂಧಿಸಿದ್ದರು.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ್ದ ಗೃಹ ಇಲಾಖೆ ಮತ್ತು ಡಿಜಿ&ಐಜಿಪಿ (DG&IGP) ಅವರು 30 ದಿನಗಳಲ್ಲಿ ಚಾರ್ಜ್‌ಶೀಟ್ (charge sheet) ಸಲ್ಲಿಸುವಂತೆ ಸೂಚಿಸಿದ್ದರು. ಹಣದ ಆಸೆಗೆ ಬಿದ್ದು, ರಕ್ಷಕ ಸ್ಥಾನದಲ್ಲಿದ್ದ ಪಿಎಸ್‌ಐಗಳು ಈ ಕೃತ್ಯದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ತಕ್ಷಣವೇ ಇವರ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳಲಾಗಿದೆ.






