ಭಟ್ಕಳ(ಉತ್ತರಕನ್ನಡ): ವಿದೇಶದಲ್ಲಿ ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೋರ್ವನಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ ಘಟನೆ ಭಟ್ಕಳ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಸಂಬಂಧ ಕಲಬುರಗಿ ಮೂಲದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಭಟ್ಕಳದ ವಿ.ಟಿ. ರಸ್ತೆ ನಿವಾಸಿ, ಉದ್ಯಮಿ ಮೂಬೀನ್ ಅಹ್ಮದ್ (52) ಎಂಬುವವರೇ ವಂಚನೆಗೊಳಗಾದವರಾಗಿದ್ದು, ತಮ್ಮ ಮಗನ ವಿದ್ಯಾಭ್ಯಾಸದ ಕನಸಿನ ಹೆಸರಿನಲ್ಲಿ ಹಣ ಕಳೆದುಕೊಂಡಿದ್ದಾರೆ. ಕಲಬುರಗಿಯ ಆದರ್ಶ ನಗರದ ಬಾರೆಯ ಹಿಲ್ಸ್ ಸರ್ಕಲ್ ನಿವಾಸಿ ಮೊಹಮ್ಮದ ಅನಾಸ್ ರೈಹಾನ್ ಎಂಬಾತನೇ ಈ ಪ್ರಕರಣದ ಆರೋಪಿಯಾಗಿದ್ದಾನೆ.
ಮೊಹಮ್ಮದ ಅನಾಸ್ ದೂರುದಾರರ ಮಗನಾದ ಮಫಾಜ್ ಅಹ್ಮದ್‌ಗೆ ಉಜ್ಬೇಕಿಸ್ತಾನ (Uzbekistan) ದೇಶದ ‘ತಾಷ್ಕೆಂಟ್ ಮೆಡಿಕಲ್ ಅಕಾಡೆಮಿ’ಯಲ್ಲಿ (Tashkent Medical Academy) ಪ್ರವೇಶಾತಿ ಕೊಡಿಸುವುದಾಗಿ ನಂಬಿಸಿದ್ದನು. ಅಷ್ಟೇ ಅಲ್ಲದೆ, ಅಲ್ಲಿ ಉಳಿದುಕೊಳ್ಳಲು ಹಾಸ್ಟೆಲ್ ವ್ಯವಸ್ಥೆ, ಊಟದ ಸೌಕರ್ಯ ಹಾಗೂ ವೀಸಾ ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದನು. ಇದನ್ನು ನಂಬಿದ ಮೂಬೀನ್ ಅವರು ನವೆಂಬರ್ 25 ರಂದು ಮತ್ತು 26 ರ ಅವಧಿಯಲ್ಲಿ ಹಂತ ಹಂತವಾಗಿ ಒಟ್ಟು 2,70,000 ರೂಪಾಯಿ ಹಣವನ್ನು ಆರೋಪಿಗೆ ಪಾವತಿಸಿದ್ದರು.
ಆದರೆ, ಹಣ ಪಡೆದ ಬಳಿಕ ಆರೋಪಿ ಅನಾಸ್, ಮೆಡಿಕಲ್ ಸೀಟು ಕೊಡಿಸದೇ ಅಥವಾ ವೀಸಾ ವ್ಯವಸ್ಥೆಯನ್ನೂ ಮಾಡದೇ ಸತಾಯಿಸಿದ್ದಾನೆ. ಅಂತಿಮವಾಗಿ ಪ್ರವೇಶಾತಿಯೂ ಇಲ್ಲದೆ, ಪಡೆದ ಹಣವನ್ನೂ ಹಿಂತಿರುಗಿಸದೇ ಮೋಸ ಮಾಡಿದ್ದಾನೆ ಎಂದು ಮೂಬೀನ್ ಅಹ್ಮದ್ ಅವರು ಭಟ್ಕಳ ಶಹರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಕುರಿತು ಗುರುವಾರ(ನ.27) ದೂರು ದಾಖಲಾಗಿದ್ದು, ಪೊಲೀಸರು ಐಪಿಸಿ ಸೆಕ್ಷನ್ 420 ಅಡಿಯಲ್ಲಿ ವಂಚನೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.






