ಅಮೆರಿಕಾ: ಇಲ್ಲಿನ ಜನನಿಬಿಡ ರಸ್ತೆಯೊಂದರಲ್ಲಿ ಹಾಲಿವುಡ್ ಸಿನಿಮಾವನ್ನು ಮೀರಿಸುವಂತಹ ಘಟನೆಯೊಂದು ನಡೆದಿದೆ. ರಸ್ತೆಯ ಮಧ್ಯಭಾಗದಲ್ಲೇ ಯುಎಸ್ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ (CBP) ಹೆಲಿಕಾಪ್ಟರ್ ಒಂದು ದಿಢೀರ್ ತುರ್ತು ಭೂಸ್ಪರ್ಶ ಮಾಡಿದೆ.
ಅಷ್ಟಕ್ಕೂ ಈ ಹೆಲಿಕಾಪ್ಟರ್ ಇಳಿದಿದ್ದು ಯಾವುದೋ ಗಣ್ಯ ವ್ಯಕ್ತಿಗಾಗಿ ಅಲ್ಲ, ಬದಲಾಗಿ ಕರ್ತವ್ಯದಲ್ಲಿದ್ದ ನಾಲ್ಕು ಕಾಲಿನ ಫೆಡರಲ್ ಏಜೆಂಟ್, ಅಂದರೆ ಪೊಲೀಸ್ ಶ್ವಾನವೊಂದರ ಪ್ರಾಣ ಉಳಿಸಲು!
ಯುಎಸ್ ಬಾರ್ಡರ್ ಪೆಟ್ರೋಲ್‌ನ ‘ಬೂ’ (Boo) ಹೆಸರಿನ ಕೆ9 ಶ್ವಾನವು ಒಟೇ ಮೌಂಟೇನ್ ವೈಲ್ಡರ್‌ನೆಸ್‌ನ (Otay Mountain Wilderness) ದುರ್ಗಮ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ ವಿಷಕಾರಿ ರಾಟಲ್ ಸ್ನೇಕ್ (rattlesnake) ಕಚ್ಚಿತ್ತು. ಅಪಾಯವನ್ನರಿತ ಶ್ವಾನದ ಹ್ಯಾಂಡ್ಲರ್ ತಕ್ಷಣವೇ ಸಹಾಯಕ್ಕಾಗಿ ಕರೆ ನೀಡಿದ್ದಾರೆ. ಕರೆ ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕಾಗಮಿಸಿದ ಸಿಬಿಪಿ ಏರ್ ಮತ್ತು ಮರೈನ್ ಆಪರೇಷನ್ಸ್ ತಂಡ, ಗಾಯಗೊಂಡ ಶ್ವಾನವನ್ನು ಹೆಲಿಕಾಪ್ಟರ್ ಮೂಲಕ ಏರ್‌ಲಿಫ್ಟ್ ಮಾಡಿದೆ.
ಲಾ ಮೆಸಾದಲ್ಲಿರುವ ತುರ್ತು ಪಶು ಚಿಕಿತ್ಸಾಲಯಕ್ಕೆ ಶ್ವಾನವನ್ನು ಆದಷ್ಟು ಬೇಗ ತಲುಪಿಸುವ ಉದ್ದೇಶದಿಂದ, ಪೈಲಟ್ ಹೆಲಿಕಾಪ್ಟರ್ ಅನ್ನು ಗ್ರೋಸ್‌ಮಾಂಟ್ ಬೌಲೆವಾರ್ಡ್ ಮತ್ತು ಜಾಕ್ಸನ್ ಡ್ರೈವ್ ಜಂಕ್ಷನ್ ಮಧ್ಯದಲ್ಲೇ ಇಳಿಸಿದ್ದಾರೆ. ರಸ್ತೆಯ ಮಧ್ಯೆ ಹೆಲಿಕಾಪ್ಟರ್ ಇಳಿಯುವುದನ್ನು ಕಂಡು ಅಲ್ಲಿನ ವಾಹನ ಸವಾರರು ಮತ್ತು ನಿವಾಸಿಗಳು ಕ್ಷಣಕಾಲ ಏನಾಗುತ್ತಿದೆ ಎಂದು ತಿಳಿಯದೆ ಕ್ಷಣಕಾಲ ಆತಂಕಗೊಂಡರು.
ಅದೃಷ್ಟವಶಾತ್, ಸಕಾಲದಲ್ಲಿ ಆಸ್ಪತ್ರೆಗೆ ತಲುಪಿದ ಕಾರಣ ‘ಬೂ’ಗೆ ಆಂಟಿವೆನಮ್ ಮತ್ತು ಐವಿ ದ್ರವಗಳನ್ನು ನೀಡಿ ಚಿಕಿತ್ಸೆ ನೀಡಲಾಯಿತು. ಸದ್ಯ ಶ್ವಾನದ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕರ್ತವ್ಯನಿರತ ಶ್ವಾನದ ಪ್ರಾಣ ಉಳಿಸಲು ಇಲಾಖೆ ತೋರಿದ ಕ್ಷಿಪ್ರತೆ ಮತ್ತು ಕಾಳಜಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.






