ಬೆಂಗಳೂರು: ಸಂಕ್ರಾಂತಿ, ಶಿವರಾತ್ರಿ ಹಬ್ಬಗಳ ಬಳಿಕ ಇದೀಗ ಯುಗಾದಿ ಹಬ್ಬಕ್ಕೆ ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಮಾತುಗಳು ಮತ್ತೆ ಮುನ್ನೆಲೆಗೆ ಬಂದಿವೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಪಟ್ಟ ಸಿಗುವ ಕಾಲ ಸನ್ನಿಹಿತವಾಗಿದೆಯೇ ಎಂಬ ಪ್ರಶ್ನೆ ಎದ್ದಿದೆ. ಸ್ವತಃ ಡಿ.ಕೆ. ಶಿವಕುಮಾರ್ ಅವರೇ ಪತ್ರಿಕಾಗೋಷ್ಠಿಯಲ್ಲಿ ಸೋನಿಯಾ ಗಾಂಧಿಯವರ ಸೂಚನೆಯನ್ನು ಉಲ್ಲೇಖಿಸಿದ್ದು, ಹೈಕಮಾಂಡ್ ಸೂಚನೆಯಂತೆ ತಾವು “ಮೂರು ತಿಂಗಳು” ಕಾಯಲು ಸಿದ್ಧರಿರುವುದಾಗಿ ಹೇಳಿರುವುದು ಈ ಊಹಾಪೋಹಗಳಿಗೆ ಪುಷ್ಠಿ ನೀಡಿದಂತಾಗಿದೆ.
“ಹಿಂದೆಯೂ ಮೂರು ತಿಂಗಳು ಕಾಯಿರಿ ಎಂದಿದ್ದರು, ಆಗಲೂ ನಾನು ಮರುಮಾತನಾಡದೆ ಕಾದಿದ್ದೆ. ಈಗಲೂ ಮೂರು ತಿಂಗಳು ಕಾಯಿರಿ ಎಂದಿದ್ದಾರೆ, ಇವತ್ತೂ ಕಾಯುತ್ತೇನೆ. ಆವತ್ತೂ ಮಾತನಾಡಿರಲಿಲ್ಲ, ಇವತ್ತೂ ಮಾತನಾಡುವುದಿಲ್ಲ,” ಎಂದು ಡಿ.ಕೆ. ಶಿವಕುಮಾರ್ ಮಾರ್ಮಿಕವಾಗಿ ನುಡಿದಿದ್ದಾರೆ.
2013ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೂ ಅವರು ಸಚಿವರಾಗಲು ಮೂರು ತಿಂಗಳು ಕಾಯಬೇಕಾಯಿತು. ಅಂದು ತಾಳ್ಮೆ ವಹಿಸಿದ ಫಲವಾಗಿ ನಂತರ ಸಚಿವ ಸ್ಥಾನ ಲಭಿಸಿತ್ತು. ಅದೇ ಮಾದರಿಯಲ್ಲಿ, ಈಗ ಮೂರು ತಿಂಗಳ ಕಾಯುವಿಕೆಯ ಬಳಿಕ ಅವರಿಗೆ ಯುಗಾದಿ ವೇಳೆಗೆ ಮುಖ್ಯಮಂತ್ರಿ ಸ್ಥಾನದ ‘ಬೆಲ್ಲ’ ಒಲಿಯಲಿದೆಯೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಗರಿಗೆದರಿದೆ.
ಹೈಕಮಾಂಡ್ ಒಪ್ಪಿಗೆ ಮೇರೆಗೆ ಯುಗಾದಿ ವೇಳೆಗೆ ನಾಯಕತ್ವ ಬದಲಾವಣೆಯಾಗಲಿದೆಯೇ ಎಂಬುದು ಸದ್ಯದ ಕುತೂಹಲ. ಮೂರು ತಿಂಗಳ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರ ಹಸ್ತಾಂತರಿಸಲು ಅಥವಾ ಸಿಎಂ ಪಟ್ಟ ಬಿಟ್ಟುಕೊಡಲು ಒಪ್ಪಿದ್ದಾರೆಯೇ ಎಂಬುದು ಇನ್ನೂ ನಿಗೂಢವಾಗಿದೆ. ಆದರೆ, ಪ್ರತಿ ಬಾರಿ ನಿರ್ಣಾಯಕ ಹುದ್ದೆ ಸಿಗುವ ಸಂದರ್ಭದಲ್ಲೂ ತಾಳ್ಮೆಯಿಂದ ಕಾಯುತ್ತಿರುವ ಡಿ.ಕೆ. ಶಿವಕುಮಾರ್ ಅವರ ಈ ನಡೆ ಮತ್ತು ಹೈಕಮಾಂಡ್‌ನ ಮೂರು ತಿಂಗಳ ಗಡುವು, ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.






