ಕುಮಟಾ: ಗೋಕರ್ಣದ ಪ್ರಸಿದ್ಧ ಮುಖ್ಯ ಕಡಲತೀರದಲ್ಲಿ ಪ್ರವಾಸಕ್ಕೆ ಬಂದಿದ್ದ ಶಾಲಾ ತಂಡವೊಂದು ಎಚ್ಚರಿಕೆ ನಿರ್ಲಕ್ಷಿಸಿ ಸಮುದ್ರಕ್ಕಿಳಿದ ಪರಿಣಾಮ ಅಪಾಯಕ್ಕೆ ಸಿಲುಕಿದ ಘಟನೆ ಶನಿವಾರ ನಡೆದಿದೆ. ಶಿವಮೊಗ್ಗ ಮೂಲದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಮುದ್ರದ ಸುಳಿಗೆ ಸಿಲುಕಿ ಮುಳುಗುತ್ತಿದ್ದಾಗ, ಸ್ಥಳದಲ್ಲಿದ್ದ ಜೀವರಕ್ಷಕ ಸಿಬ್ಬಂದಿ ಸಮಯಪ್ರಜ್ಞೆಯಿಂದಾಗಿ ಐವರ ಪ್ರಾಣ ಉಳಿದಿದ್ದು, ಸಂಭವಿಸಬಹುದಾಗಿದ್ದ ಭಾರೀ ದುರಂತವೊಂದು ತಪ್ಪಿದಂತಾಗಿದೆ.
ಶಿವಮೊಗ್ಗದ ಮೇಲ್ಗಟ್ಟ ಸರ್ಕಾರಿ ಹಿರಿಯ ಪ್ರೌಢಶಾಲೆಯ 39 ಜನರಿದ್ದ ತಂಡ ಶೈಕ್ಷಣಿಕ ಪ್ರವಾಸಕ್ಕಾಗಿ ಗೋಕರ್ಣಕ್ಕೆ ಆಗಮಿಸಿತ್ತು. ಸಮುದ್ರದ ಅಲೆಗಳ ಅಬ್ಬರ ಹೆಚ್ಚಿದ್ದ ಕಾರಣ ನೀರಿಗಿಳಿಯದಂತೆ ಲೈಫ್ ಗಾರ್ಡ್‌ಗಳು ಎಚ್ಚರಿಕೆ ನೀಡಿದ್ದರು. ಆದರೆ, ಈ ಸೂಚನೆಯನ್ನು ಲೆಕ್ಕಿಸದೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನೀರಿಗಿಳಿದಿದ್ದಾರೆ. ಈ ವೇಳೆ ಹತ್ತನೇ ತರಗತಿಯ ವಿದ್ಯಾರ್ಥಿಗಳಾದ ನಿಯಾಜ್ ಅಹಮದ್, ಮೊಹಮ್ಮದ್ ಜಿಲಾಲ್, ಆಕಾಶ್ ಹಾಗೂ ಓರ್ವ ಶಿಕ್ಷಕರು ಅಲೆಗಳ ರಭಸಕ್ಕೆ ಸಿಲುಕಿ ಮೇಲೆ ಬರಲಾಗದೇ ಪರದಾಡಿದ್ದಾರೆ.
ಕೂಡಲೇ ಕಾರ್ಯಪ್ರವೃತ್ತರಾದ ಕರ್ತವ್ಯನಿರತ ಜೀವರಕ್ಷಕರಾದ ಮೋಹನ ಅಂಬಿಗ ಮತ್ತು ರೋಷನ್ ಖಾರ್ವಿ ಅವರು ಸಮುದ್ರಕ್ಕೆ ಹಾರಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಇವರಿಗೆ ಸ್ಥಳೀಯ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿ ದರ್ಶನ್ ಹರಿಕಾಂತ್, ಚಿದಾನಂದ ಲಕ್ಕುಮನೆ, ದೀಪಕ್ ಗೌಡ, ಅಶೋಕ್, ಮಹೇಶ್, ಜಗ್ಗು ಮತ್ತು ಕಮಲಾಕರ ಅವರು ಸಾಥ್ ನೀಡಿದ್ದು, ಎಲ್ಲರ ತ್ವರಿತ ಕಾರ್ಯಾಚರಣೆಯಿಂದಾಗಿ ಐವರು ಪ್ರವಾಸಿಗರನ್ನು ಸುರಕ್ಷಿತವಾಗಿ ದಡಕ್ಕೆ ತರಲಾಗಿದೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.






