ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA – Karnataka State Cricket Association) ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದ ಚುನಾವಣಾ ವಿವಾದದಲ್ಲಿ ಹೈಕೋರ್ಟ್ (High Court) ಮಹತ್ವದ ಆದೇಶ ನೀಡಿದೆ. ಕೆಎಸ್‌ಸಿಎ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೆ.ಎನ್. ಶಾಂತಕುಮಾರ್ (K.N. Shantha Kumar) ಅವರ ನಾಮಪತ್ರವನ್ನು ತಿರಸ್ಕರಿಸಿದ್ದ ಚುನಾವಣಾಧಿಕಾರಿಯ ಕ್ರಮವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ನಾಮಪತ್ರ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಕೆ.ಎನ್. ಶಾಂತಕುಮಾರ್ ಅವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾ. ಸೂರಜ್ ಗೋವಿಂದರಾಜ್ (Justice Suraj Govindaraj) ಅವರಿದ್ದ ಹೈಕೋರ್ಟ್ ಪೀಠವು ವಿಚಾರಣೆ ನಡೆಸಿದೆ. ನ್ಯಾಯಾಲಯವು ಚುನಾವಣಾಧಿಕಾರಿಯ ನಿರ್ಧಾರವನ್ನು ರದ್ದುಗೊಳಿಸಿ, ಶಾಂತಕುಮಾರ್ ಅವರಿಗೆ ಕೆಎಸ್‌ಸಿಎ ಚುನಾವಣೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿದೆ.
ಕೆಎಸ್‌ಸಿಎ ಚುನಾವಣೆ (KSCA Election) ನಿಗದಿತ ವೇಳಾಪಟ್ಟಿಯಂತೆ ಡಿ.7 ರಂದೇ ನಡೆಯಲಿದೆ ಎಂದು ಹೈಕೋರ್ಟ್ ಸೂಚನೆ ನೀಡಿದೆ. ಈ ಆದೇಶದಿಂದಾಗಿ, ಕೆಎಸ್‌ಸಿಎ ಚುನಾವಣೆಯು ನಿಗದಿತ ದಿನಾಂಕದಂದು ನಡೆಯುವುದು ಖಚಿತವಾಗಿದ್ದು, ಶಾಂತಕುಮಾರ್ ಅವರಿಗೆ ಸ್ಪರ್ಧಿಸಲು ಹಾದಿ ಸುಗಮವಾದಂತಾಗಿದೆ.






