ನವದೆಹಲಿ: ಕರ್ನಾಟಕದಲ್ಲಿ ಮುಖ್ಯಮಂತ್ರಿ (CM) ಮತ್ತು ಉಪಮುಖ್ಯಮಂತ್ರಿ (DCM) ನಡುವಿನ ರಾಜಕೀಯ ಬೆಳವಣಿಗೆಗಳ ಕುರಿತು ತಾವು ನೀಡಿದ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ವರದಿ ಮಾಡಿವೆ ಎಂದು ಮಾಜಿ ಸಂಸದ ಹಾಗೂ ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ (DK Suresh) ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸುರೇಶ್, ಸಿಎಂ ಅವರು (Siddaramaiah) ಕೊಟ್ಟ ಮಾತು ಉಳಿಸಿಕೊಳ್ಳಬೇಕು ಅಂತಾ ನಾನು ಹೇಳಿದ್ದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಆದರೆ, ನನ್ನ ಹೇಳಿಕೆ ಬೇರೆ ಇತ್ತು. ನನ್ನ ಮಾತನ್ನು ಸಂಪೂರ್ಣವಾಗಿ ತಿರುಚಲಾಗಿದೆ. ನಾನು ಆ ರೀತಿ ಹೇಳಿಲ್ಲ, ನೀವು ತೋರಿಸಿದ್ದು ಬೇರೆ ಎಂದು ಅವರು ಸ್ಪಷ್ಟಪಡಿಸಿದರು.
ರಾಜ್ಯದ ಜನರಿಗೆ ನಾಯಕರು ಕೊಟ್ಟ ಮಾತುಗಳ ಬಗ್ಗೆ ಗಮನ ಕೊಡಬೇಕು. ಅದರಂತೆ ಸಿಎಂ ಮತ್ತು ಡಿಸಿಎಂ ನಡೆದುಕೊಳ್ತಾರೆ. ಈ ಬಾರಿ ಇಬ್ಬರು ನಾಯಕರು ಒಟ್ಟಾಗಿ ಮಾತನಾಡಿದ್ದಾರೆ. ಒಟ್ಟಾಗಿ ಉಪಾಹಾರಕ್ಕೆ ಸೇರಿ, ಒಗ್ಗಟ್ಟಾಗಿದ್ದೇವೆ ಅಂತಾ ಹೇಳೋದು ಅವರ (CM and DCM) ಕರ್ತವ್ಯ. ಈ ಕುರಿತು ನಾನು ಹೆಚ್ಚಿಗೆ ಮಾತಾಡೋದು ಸರಿ ಅಲ್ಲ.
ಡಿ.ಕೆ. ಶಿವಕುಮಾರ್ ಅವರು ಪ್ರತಿ ಹಂತದಲ್ಲೂ ಸೋನಿಯಾ ಗಾಂಧಿ ತ್ಯಾಗದ ಮಾತು ಮತ್ತು ಗಾಂಧಿ ಕುಟುಂಬದ ಬಗ್ಗೆ ಹೇಳಿದ್ದಾರೆ. ನಮ್ಮಲ್ಲಿ ಯಾವುದೇ ಬಣ ರಾಜಕೀಯ ಇಲ್ಲ. ಡಿಕೆಶಿ ಯಾವಾಗಲೂ ‘140 ಶಾಸಕರು ನಮ್ಮವರು, ನಾನು ಅಧ್ಯಕ್ಷ ಎಂದು ಹೇಳುತ್ತಾರೆ ಎಂದು ಡಿಕೆಶಿ ಪರ ಮಾತನಾಡಿದರು.
ನಾನು ಇಲ್ಲಿಗೆ ದೆಹಲಿಗೆ ಖಾಸಗಿ ಕಾರ್ಯಕ್ರಮದ ಸಲುವಾಗಿ ಬಂದಿದ್ದೇನೆ. ಹೈಕಮಾಂಡ್ ನಾಯಕರು ಸಿಕ್ಕರೆ ಖಂಡಿತ ಭೇಟಿಯಾಗುತ್ತೇನೆ. ಶನಿವಾರ ಮತ್ತು ಭಾನುವಾರ ಆಗಿರುವ ಕಾರಣ ಭೇಟಿ ಅನುಮಾನ. ಆದರೂ ವರಿಷ್ಠರು ಸಮಯ ನೀಡಿದರೆ ಭೇಟಿಯಾಗುತ್ತೇನೆ ಎಂದು ತಿಳಿಸಿದರು.






