ಭಾರತೀಯ ಮಹಿಳಾ ಕ್ರಿಕೆಟ್ ತಂಡದ ತಾರಾ ಆಟಗಾರ್ತಿ ಸ್ಮೃತಿ ಮಂಧಾನ ಮತ್ತು ಅವರ ಭಾವಿ ಪತಿ, ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರ ವಿವಾಹ ಸಮಾರಂಭವು ಅನಿವಾರ್ಯ ಕಾರಣಗಳಿಂದ ಮುಂದೂಡಲ್ಪಟ್ಟಿದೆ. ನವೆಂಬರ್ 23 ರಂದು ನಿಗದಿಯಾಗಿದ್ದ ಈ ಮದುವೆಯು ಸ್ಮೃತಿ ಅವರ ತಂದೆ ಶ್ರೀನಿವಾಸ್ ಮಂಧಾನ ಅವರ ಹಠಾತ್ ಅನಾರೋಗ್ಯದ ಕಾರಣದಿಂದ ತಡವಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳ ನಡುವೆ, ಈ ಜೋಡಿ ತಮ್ಮ ಇನ್‌ಸ್ಟಾಗ್ರಾಮ್ ಬಯೋವನ್ನು(Bio) ಅಪ್‌ಡೇಟ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಮದುವೆ ಮುಂದೂಡಿಕೆಯ ಸುದ್ದಿ ಹೊರಬೀಳುತ್ತಿದ್ದಂತೆಯೇ, ಸ್ಮೃತಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಿಂದ ನಿಶ್ಚಿತಾರ್ಥದ ಫೋಟೋಗಳು ಹಾಗೂ ಮದುವೆ ಸಂಬಂಧಿತ ಪೋಸ್ಟ್‌ಗಳನ್ನು ಅಳಿಸಿಹಾಕಿದ್ದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ರೆಡ್ಡಿಟ್ ಮತ್ತು ಎಕ್ಸ್ (ಟ್ವಿಟರ್) ನಂತಹ ವೇದಿಕೆಗಳಲ್ಲಿ ಇವರ ಸಂಬಂಧದ ಬಗ್ಗೆ ಹಲವು ಊಹಾಪೋಹಗಳು ಹಬ್ಬಿದ್ದವು. ಇದೀಗ ಈ ಎಲ್ಲಾ ಊಹಾಪೋಹಗಳ ನಡುವೆಯೇ, ಉಭಯ ನಾಯಕರು ತಮ್ಮ ಇನ್‌ಸ್ಟಾಗ್ರಾಮ್ ಬಯೋದಲ್ಲಿ ‘ದೃಷ್ಟಿ ಬೊಟ್ಟು’ (nazar amulet ????) ಎಮೋಜಿಯನ್ನು ಸೇರಿಸುವ ಮೂಲಕ ತಮ್ಮ ಸಂಬಂಧಕ್ಕೆ ಕೆಟ್ಟ ದೃಷ್ಟಿ ಬೀಳದಿರಲಿ ಎಂಬರ್ಥದಲ್ಲಿ ಪರೋಕ್ಷ ಸಂದೇಶ ರವಾನಿಸಿದ್ದಾರೆ.
ಸ್ಮೃತಿ ಅವರ ತಂದೆಯ ಆಸ್ಪತ್ರೆ ದಾಖಲಾತಿಯ ನಂತರ, ವರ ಪಲಾಶ್ ಮುಚ್ಚಲ್ ಕೂಡ ಅಸಿಡಿಟಿ ಮತ್ತು ವೈರಲ್ ಸೋಂಕಿನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಅವರನ್ನು ಮೊದಲು ಸಾಂಗ್ಲಿಯಲ್ಲಿ ಚಿಕಿತ್ಸೆಗೆ ಒಳಪಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈನ ಗೋರೆಗಾಂವ್‌ನಲ್ಲಿರುವ ಎಸ್‌ಆರ್‌ವಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಚಿಕಿತ್ಸೆ ನಂತರ ಗುಣಮುಖರಾಗಿರುವ ಪಲಾಶ್ ಅವರು ನವೆಂಬರ್ 26 ರಂದು ಮನೆಗೆ ಮರಳಿದ್ದಾರೆ ಎಂದು ವರದಿಗಳು ತಿಳಿಸಿವೆ.
ಈ ಕಷ್ಟದ ಸಮಯದಲ್ಲಿ ಸ್ಮೃತಿ ಮಂಧಾನ ಅವರಿಗೆ ಮಾನಸಿಕ ಧೈರ್ಯ ತುಂಬಲು ಅವರ ಆಪ್ತ ಸ್ನೇಹಿತೆ ಹಾಗೂ ಸಹ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಮಹಿಳಾ ಬಿಗ್ ಬ್ಯಾಷ್ ಲೀಗ್‌ನಲ್ಲಿ (WBBL) ಬ್ರಿಸ್ಬೇನ್ ಹೀಟ್ ಪರ ಆಡುವುದನ್ನು ಅರ್ಧಕ್ಕೇ ಬಿಟ್ಟು, ಭಾರತದಲ್ಲೇ ಉಳಿದುಕೊಳ್ಳಲು ಅವರು ನಿರ್ಧರಿಸಿದ್ದಾರೆ. ತಮ್ಮ ಆಟಗಾರ್ತಿಯ ನಿರ್ಧಾರಕ್ಕೆ ಫ್ರಾಂಚೈಸಿ ಕೂಡ ಒಪ್ಪಿಗೆ ಸೂಚಿಸಿದೆ.






