ಜೈಪುರ: ದಿನಕ್ಕೆ ಕೇವಲ 500-600 ರೂ. ಸಂಪಾದಿಸಿಕೊಂಡು, ಎರಡು ಕೋಣೆಯ ಗುಡಿಸಲಿನಲ್ಲಿ ವಾಸವಾಗಿದ್ದ ಒಬ್ಬ ರ‍್ಯಾಪಿಡೋ ಚಾಲಕನ ( Rapido driver) ಬ್ಯಾಂಕ್ ಖಾತೆಯ ವಹಿವಾಟು (Transaction) ನೋಡಿ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ.
ಅಕ್ರಮ ಹಣ ವರ್ಗಾವಣೆ ತನಿಖೆ ವೇಳೆ ರ‍್ಯಾಪಿಡೋ ಚಾಲಕನ ಬ್ಯಾಂಕ್ ಖಾತೆಯಲ್ಲಿ ನಡೆದಿರುವ ಬೃಹತ್ ವಹಿವಾಟು ಬಯಲಾಗಿದ್ದು, ಆತನನ್ನು ಬಂಧಿಸಲಾಗಿದೆ.
1xBet ಆನ್‌ಲೈನ್ ಬೆಟ್ಟಿಂಗ್ ನೆಟ್‌ವರ್ಕ್‌ಗೆ (Online Betting Network) ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆಯ ತನಿಖೆ ನಡೆಸುತ್ತಿದ್ದಾಗ, ಇ.ಡಿ. ಅಧಿಕಾರಿಗಳಿಗೆ ಬೈಕ್ ಟ್ಯಾಕ್ಸಿ ಚಾಲಕನ ಈ ವ್ಯವಹಾರಗಳ ಬಗ್ಗೆ ಮಾಹಿತಿ ಸಿಕ್ಕಿದೆ. 2024ರ ಆಗಸ್ಟ್ 19 ರಿಂದ 2025ರ ಏಪ್ರಿಲ್ 16ರ ನಡುವಿನ ಎಂಟು ತಿಂಗಳ ಅವಧಿಯಲ್ಲಿ, ಈ ಚಾಲಕನ ಖಾತೆಯಲ್ಲಿ ಬರೋಬ್ಬರಿ ₹331.36 ಕೋಟಿ ರೂಪಾಯಿಗಳ ವಹಿವಾಟು ನಡೆದಿದೆ.
ಅಪರಿಚಿತರ ಮದುವೆಗೆ ₹1 ಕೋಟಿ ಖರ್ಚು
ಚಾಲಕನ ಖಾತೆಯಿಂದ ಗುಜರಾತಿನ ಯುವ ರಾಜಕೀಯ ನಾಯಕ ಅದಿತ್ಯ ಝುಲಾ (Aditya Jhula) ಅವರ ಮದುವೆಗೆ ಹಣ ಪಾವತಿಯಾಗಿದೆ. ಈ ನಾಯಕನೊಂದಿಗೆ ಚಾಲಕನಿಗೆ ಯಾವುದೇ ರೀತಿಯ ವೈಯಕ್ತಿಕ ಸಂಪರ್ಕವಿರಲಿಲ್ಲ.ಆದರೂ ಉದಯಪುರದ ತಾಜ್ ಅರಾವಳಿ ರೆಸಾರ್ಟ್‌ನಲ್ಲಿ (Taj Aravali Resort) ನಡೆದ ಈ ಮದುವೆಯ ಬಿಲ್‌ಗಳನ್ನು ಚಾಲಕ ಪಾವತಿಸಿದ್ದು, ಖರ್ಚಿನ ಒಟ್ಟು ಮೊತ್ತ ₹1 ಕೋಟಿ ರೂಪಾಯಿಗಳಷ್ಟಾಗಿದೆ.
ಚಾಲಕನ ಖಾತೆಯಿಂದ ಹಣ ವರ್ಗಾಯಿಸಲಾದ ಮತ್ತು ಜಮೆಯಾದ ಎಲ್ಲಾ ಖಾತೆಗಳು ಅಪರಿಚಿತವಾಗಿದ್ದು, ಒಂದಕ್ಕೊಂದು ಸಂಬಂಧವೇ ಇಲ್ಲದಿರುವುದು ಅಚ್ಚರಿ ತಂದಿದೆ. ಒಂದು ಖಾತೆ ಬೆಟ್ಟಿಂಗ್ ಖಾತೆಗೆ ಲಿಂಕ್ ಆಗಿರುವುದು ಪತ್ತೆಯಾಗಿದ್ದರೂ, ಚಾಲಕನ ಫೋನ್ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಬೆಟ್ಟಿಂಗ್‌ಗೆ ಸಂಬಂಧಿಸಿದ ಯಾವುದೇ ನೇರ ಮಾಹಿತಿ ಸಿಕ್ಕಿಲ್ಲ. ಇ.ಡಿ. ಅಧಿಕಾರಿಗಳು ಈ ಅನಾಮಿಕ ವ್ಯವಹಾರಗಳ ಹಿಂದಿನ ಸೂತ್ರಧಾರರು ಯಾರು, ಮತ್ತು ಈ ಬೃಹತ್ ಹಣದ ಮೂಲದ ಕುರಿತು ತೀವ್ರ ತನಿಖೆ ಮುಂದುವರಿಸಿದ್ದಾರೆ.






