ಧಾರವಾಡ: ಉತ್ತರ ಕರ್ನಾಟಕದ ಪ್ರಸಿದ್ಧ ಯೂಟ್ಯೂಬರ್ ಮುಕಳೆಪ್ಪನ ಮದುವೆ ಪ್ರಕರಣವು ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ಮುಕಳೆಪ್ಪನ ಪತ್ನಿ ಗಾಯತ್ರಿ ಅವರ ತಾಯಿ ಶಿವಕ್ಕ ನ್ಯಾಯಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಸಂಬಂಧ ಕೋರ್ಟ್ ನೀಡಿದ ಸಮನ್ಸ್ ತಲುಪಿಸಲು ಶಿವಕ್ಕ ನೇರವಾಗಿ ಮುಕಳೆಪ್ಪನ ಮನೆ ಬಾಗಿಲಿಗೆ ಬಂದ ಘಟನೆ ಧಾರವಾಡದಲ್ಲಿ ನಡೆದಿದೆ.
ತನ್ನ ಮಗಳು ಗಾಯತ್ರಿಯ ತಲೆಕೆಡಿಸಿ ಮುಕಳೆಪ್ಪ ಮದುವೆಯಾಗಿದ್ದಾನೆ ಎಂದು ಆರೋಪಿಸಿರುವ ಶಿವಕ್ಕ, ಈ ವಿವಾಹಕ್ಕೆ ಬಳಸಲಾದ ದಾಖಲೆಗಳು ನಕಲಿ ಎಂದು ದೂರಿದ್ದಾರೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ವಿವಾಹ ನೋಂದಣಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ಅವರು ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೋರ್ಟ್ ನೀಡಿದ ಸಮನ್ಸ್ ಅನ್ನು ಜಾರಿ ಮಾಡಲು ಅವರು ಧಾರವಾಡ ನಗರದಲ್ಲಿರುವ ಮುಕಳೆಪ್ಪನ ನಿವಾಸಕ್ಕೆ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಶಿವಕ್ಕ ಅವರಿಗೆ ಶ್ರೀರಾಮ ಸೇನೆ ಕಾರ್ಯಕರ್ತರು ಬೆಂಬಲ ಸೂಚಿಸಿದ್ದು, ಅವರೊಂದಿಗೆ ಮನೆ ಬಳಿ ಆಗಮಿಸಿದ್ದರು. ಸಮನ್ಸ್ ಹಿಡಿದು ಮುಕಳೆಪ್ಪನ ಮನೆಯ ಮುಂದೆ ನಿಂತ ಶಿವಕ್ಕ, ತಮ್ಮ ಮಗಳನ್ನು ಪುಸಲಾಯಿಸಿ ಕರೆದೊಯ್ದು ಅನ್ಯಾಯ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಯೂಟ್ಯೂಬರ್ ಮುಕಳೆಪ್ಪನ ಮದುವೆ ವಿಚಾರವು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು, ಇದೀಗ ಕಾನೂನು ಹೋರಾಟದ ರೂಪ ಪಡೆದುಕೊಂಡಿದೆ.






