ನವದೆಹಲಿ: ಮದುವೆ ಸಮಾರಂಭ ಮುಗಿಸಿ ಹಿಂತಿರುಗುತ್ತಿದ್ದ ಮರ್ಸಿಡಿಸ್ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಅಲ್ಲಿಯೇ ನಿಂತಿದ್ದ ಯುವಕನೊಬ್ಬ ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ದೆಹಲಿಯ ವಸಂತ ಕುಂಜ್ ಪ್ರದೇಶದ ಆಂಬಿಯನ್ಸ್ ಮಾಲ್ ಬಳಿ ನಡೆದಿದೆ. ಭಾನುವಾರ ಮುಂಜಾನೆ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಕರೋಲ್ ಬಾಗ್ ನಿವಾಸಿಯಾದ ಚಾಲಕ ಶಿವಂ (29) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಮಾಹಿತಿಯ ಪ್ರಕಾರ, ಆರೋಪಿ ಶಿವಂ ಮದುವೆಗೆ ಹೋಗಲು ತನ್ನ ಸ್ನೇಹಿತನ ಮರ್ಸಿಡಿಸ್ ಕಾರನ್ನು ಪಡೆದುಕೊಂಡಿದ್ದ. ಪತ್ನಿ ಮತ್ತು ಅಣ್ಣನೊಂದಿಗೆ ಮದುವೆ ಮುಗಿಸಿ ಮನೆಗೆ ಮರಳುವಾಗ ನೆಲ್ಸನ್ ಮಂಡೇಲಾ ಮಾರ್ಗದಲ್ಲಿನ ರಸ್ತೆ ತಿರುವಿನ ಬಳಿ (Diversion) ಕಾರಿನ ನಿಯಂತ್ರಣ ಕಳೆದುಕೊಂಡಿದ್ದಾನೆ. ಪರಿಣಾಮವಾಗಿ, ವೇಗವಾಗಿ ಬಂದ ಕಾರು ಆಟೋ ಸ್ಟ್ಯಾಂಡ್ ಬಳಿ ನಿಂತಿದ್ದ ಮೂವರು ವ್ಯಕ್ತಿಗಳ ಮೇಲೆ ಹರಿದು ಕಂಬಕ್ಕೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಮೂವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಉತ್ತರಾಖಂಡದ ಚಮೋಲಿ ಮೂಲದ ರೋಹಿತ್ ಸಿಂಗ್ (23) ಎಂಬುವವರು ಮೃತಪಟ್ಟಿದ್ದಾರೆ. ಇನ್ನುಳಿದ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಂತ್ರಸ್ತರೆಲ್ಲರೂ ಆಂಬಿಯನ್ಸ್ ಮಾಲ್‌ನ ರೆಸ್ಟೋರೆಂಟ್ ಒಂದರ ಸಿಬ್ಬಂದಿಯಾಗಿದ್ದರು ಎಂದು ನೈರುತ್ಯ ದೆಹಲಿಯ ಡಿಸಿಪಿ ಅಮಿತ್ ಗೋಯಲ್ ತಿಳಿಸಿದ್ದಾರೆ. ಅಪಘಾತದ ನಂತರ ಹಾನಿಗೊಳಗಾದ ಕಾರನ್ನು ಜಪ್ತಿ ಮಾಡಲಾಗಿದ್ದು, ಆರೋಪಿ ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.






