Home State Politics National More
STATE NEWS

Goa | ಪರ್ತಗಾಳಿ ಮಠದಲ್ಲಿ ವೈಭವದ ‘ಸೀತಾರಾಮ ಕಲ್ಯಾಣ’; ಭಕ್ತರನ್ನು ಮಂತ್ರಮುಗ್ಧಗೊಳಿಸಿದ ದೈವಿಕ ಕ್ಷಣ

Gokarna partagali math seetharama kalyana celebration goa
Posted By: Sagaradventure
Updated on: Nov 30, 2025 | 10:41 AM

ಗೋವಾ: ಗೋಕರ್ಣ ಪರ್ತಗಾಳಿ ಮಠದ ಸಾರ್ಧ ಪಂಚಶತಮಾನೋತ್ಸವದ 550ನೇ ವರ್ಷಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ‘ಸೀತಾರಾಮ ಕಲ್ಯಾಣ’ ಮಹೋತ್ಸವವು ಶನಿವಾರ ಸಂಜೆ ಅತ್ಯಂತ ವೈಭವದಿಂದ ನೆರವೇರಿತು. ಪರ್ತಗಾಳಿಯ ಮೂಲ ಮಠದ ಜೀವೋತ್ತಮ ವೇದಿಕೆಯಲ್ಲಿ ನಡೆದ ಈ ದೈವಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಸಾವಿರಾರು ಭಕ್ತರು ಭಾವಪರವಶರಾದರು.

ಮದುವೆಯ ಸಂಭ್ರಮ ಮನೆಮಾಡಿದ್ದ ಮಠದ ಆವರಣದಲ್ಲಿ, ಬೆಳಗಾವಿಯ ಸದಾಶಿವ ಬಾಳಿಗ ಕುಟುಂಬದವರು ವರನ ಕಡೆಯವರಾಗಿ ನಿಂತರೆ, ಮಡಗಾಂವನ ಸಂಜಯ ಪೈ ರಾಯಟೂರಕರ್ ಅವರು ವಧುವಿನ ಕಡೆಯವರಾಗಿ ಸೀತಾಮಾತೆಯನ್ನು ಧಾರೆ ಎರೆದುಕೊಟ್ಟರು. ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಪ್ರಭು ಶ್ರೀರಾಮಚಂದ್ರ ದೇವರು ಸೀತಾಮಾತೆಗೆ ಮಾಂಗಲ್ಯ ಧಾರಣೆ ಮಾಡುವ ಆ ರೋಮಾಂಚಕ ಕ್ಷಣವನ್ನು ಕಣ್ತುಂಬಿಕೊಂಡರು. ವೈದಿಕರ ಮಂತ್ರಘೋಷ ಮತ್ತು ಭಕ್ತರ ಜಯಘೋಷ ಮುಗಿಲುಮುಟ್ಟಿತ್ತು.

ಕಾರ್ಯಕ್ರಮದಲ್ಲಿ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಆಗಮನವಾಗುತ್ತಿದ್ದಂತೆ ಭಕ್ತರು ಜಯಕಾರದೊಂದಿಗೆ ಸ್ವಾಗತಿಸಿದರು. ಶ್ರೀಗಳು ವೇದಿಕೆಯಲ್ಲಿ ಕೋದಂಡರಾಮನ ಪ್ರತಿಮೆಯನ್ನು ಅನಾವರಣಗೊಳಿಸಿ, ನೂತನ ವಧು-ವರರಾದ ಸೀತಾ ಮಾತೆ ಮತ್ತು ಪ್ರಭು ಶ್ರೀರಾಮಚಂದ್ರ ದೇವರನ್ನು ಪೂಜಿಸಿದರು.

ಕರಸೇವಕರಿಗೆ ಗೌರವ: ಪರ್ತಗಾಳಿಯ ಮೂಲಮಠದ ನವೀಕರಣದ ಸಂದರ್ಭದಲ್ಲಿ ಮೂರು ರಾಜ್ಯಗಳಿಂದ ಆಗಮಿಸಿ ಶ್ರಮದಾನ ಮಾಡಿದ್ದ ನೂರಾರು ಕರಸೇವಕರನ್ನು ಇದೇ ವೇಳೆ ಗೌರವಿಸಲಾಯಿತು. ಶ್ರೀಗಳು ಎಲ್ಲಾ ರಾಮಸೇವಕರನ್ನು ಕರೆದು ತಮ್ಮ ಹಸ್ತಾಕ್ಷರವಿರುವ ಪ್ರತಿಯನ್ನು ನೀಡಿ, “ತಾವು ಮಾಡಿದ ಸೇವೆ ಸಾಕ್ಷಾತ್ ಶ್ರೀರಾಮಚಂದ್ರರಿಗೆ ತಲುಪಿದೆ,” ಎಂದು ಹರಸಿದರು. ಕಲ್ಯಾಣೋತ್ಸವದ ನಂತರ ನೆರೆದಿದ್ದ ಭಕ್ತರಿಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು.

ಈ ಸಂದರ್ಭದಲ್ಲಿ ಮುಕುಂದ ಭಟ್, ನಾರಾಯಣ ಭಟ್, ಸಂತೋಷ ಆಚಾರ್ಯ, ವಿಕ್ರಮ್ ಭಟ್ ಸೇರಿದಂತೆ ಉಭಯ ರಾಜ್ಯಗಳ ವೈದಿಕರು ಉಪಸ್ಥಿತರಿದ್ದರು. ರಾಮು ಕಿಣಿ ಶಿರಸಿ ಅವರು ಕಾರ್ಯಕ್ರಮ ನಿರೂಪಿಸಿದರು.

Shorts Shorts