ಹುಬ್ಬಳ್ಳಿ: ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸುತ್ತಿದ್ದ ಇಂಡಿಗೋ ವಿಮಾನವೊಂದು ಲ್ಯಾಂಡಿಂಗ್ ಆಗುವ ಅಂತಿಮ ಕ್ಷಣದಲ್ಲಿ ಹಠಾತ್ ಮರು ಟೇಕ್-ಆಫ್ (Go-around) ಆಗುವ ಮೂಲಕ ಸುಮಾರು 70ಕ್ಕೂ ಹೆಚ್ಚು ಪ್ರಯಾಣಿಕರಲ್ಲಿ ಕೆಲಕಾಲ ತೀವ್ರ ಆತಂಕ ಸೃಷ್ಟಿಸಿದ ಘಟನೆ ಶನಿವಾರ ರಾತ್ರಿ ನಡೆದಿದೆ.
ಇಂಡಿಗೋ ವಿಮಾನ 6E-7162 ಶನಿವಾರ ಸಂಜೆ 6:45ಕ್ಕೆ ಬೆಂಗಳೂರಿನಿಂದ ಹೊರಟಿದ್ದು, ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ 7:45ರ ಸುಮಾರಿಗೆ ಇಳಿಯಬೇಕಿತ್ತು. ಆದರೆ ರನ್‌ವೇ ಸಮೀಪಿಸುತ್ತಿದ್ದಂತೆಯೇ ಕೇಳಿಬಂದ ದೊಡ್ಡ ಶಬ್ದ ಮತ್ತು ಹಠಾತ್ ಬದಲಾವಣೆಯಿಂದಾಗಿ ಪೈಲಟ್ ವಿಮಾನವನ್ನು ಲ್ಯಾಂಡ್ ಮಾಡದೆ ಮತ್ತೆ ಆಕಾಶಕ್ಕೆ ಹಾರಿಸಿದ್ದಾರೆ.
ವಿಮಾನ ಇನ್ನೇನು ನೆಲಕ್ಕೆ ಸ್ಪರ್ಶಿಸಬೇಕು ಎನ್ನುವಷ್ಟರಲ್ಲಿ ದೊಡ್ಡ ಸದ್ದು ಕೇಳಿಸಿತು, ಆ ಕ್ಷಣವೇ ವಿಮಾನವು ಮತ್ತೆ ಮೇಲಕ್ಕೆ ಹಾರಿತು ಎಂದು ಪ್ರತ್ಯಕ್ಷದರ್ಶಿ ಪ್ರಯಾಣಿಕರು ತಿಳಿಸಿದ್ದಾರೆ. ಈ ಹಠಾತ್ ಬೆಳವಣಿಗೆಯಿಂದ ವಿಮಾನದೊಳಗಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ವಿಮಾನವು ಲ್ಯಾಂಡಿಂಗ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಸುಮಾರು 15 ನಿಮಿಷಗಳ ಕಾಲ ಆಕಾಶದಲ್ಲಿಯೇ ಹಾರಾಟ ನಡೆಸಿ, ಅಂತಿಮವಾಗಿ ರಾತ್ರಿ 8 ಗಂಟೆಯ ಸುಮಾರಿಗೆ ಸುರಕ್ಷಿತವಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ.
ಈ ವಿಮಾನದಲ್ಲಿ ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ, ವಿಧಾನಪರಿಷತ್ ಸದಸ್ಯ ಬಾದರಲಿ ಹಾಗೂ ಖ್ಯಾತ ವೈದ್ಯ ಡಾ.ಜಿ.ಬಿ.ಸತ್ತೂರ ಸೇರಿದಂತೆ ಹಲವು ಗಣ್ಯರು ಪ್ರಯಾಣಿಸುತ್ತಿದ್ದರು.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಡಾ. ಜಿ.ಬಿ.ಸತ್ತೂರ, “ಜೋರಾದ ಗಾಳಿ ಬೀಸಿದ್ದರಿಂದ ವಿಮಾನ ಇಳಿಯುವ ಸಂದರ್ಭದಲ್ಲಿ ದೊಡ್ಡ ಶಬ್ದ ಉಂಟಾಗಿರಬಹುದು ಎಂದು ವಿಮಾನ ನಿಲ್ದಾಣದಲ್ಲಿ ಕೆಲವರು ಅಭಿಪ್ರಾಯಪಟ್ಟರು. ಸುರಕ್ಷಿತವಾಗಿ ಲ್ಯಾಂಡ್ ಆದ ಬಳಿಕ ನಾವೆಲ್ಲರೂ ನಿಟ್ಟುಸಿರು ಬಿಟ್ಟೆವು,” ಎಂದು ಹೇಳಿದ್ದಾರೆ.
ಆದರೆ, ಲ್ಯಾಂಡಿಂಗ್ ವೇಳೆ ಎದುರಾದ ನಿರ್ದಿಷ್ಟ ತಾಂತ್ರಿಕ ಸಮಸ್ಯೆ ಅಥವಾ ಈ ಘಟನೆಯ ಬಗ್ಗೆ ತಮಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದ ಪ್ರಭಾರಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.






