ಮಂಗಳೂರು: ಚಿನ್ನದ ಅಂಗಡಿ ಮಾಲೀಕರಿಗೆ ಆರ್‌ಟಿಜಿಎಸ್ (RTGS) ಮೂಲಕ ಹಣ ವರ್ಗಾವಣೆ ಮಾಡುವುದಾಗಿ ನಂಬಿಸಿ, ಬರೋಬ್ಬರಿ 31 ಲಕ್ಷ ರೂ. ಮೌಲ್ಯದ ಚಿನ್ನದ ಬಿಸ್ಕೆಟ್‌ಗಳನ್ನು ಪಡೆದು ವಂಚಿಸಿದ್ದ ಅಂತರರಾಜ್ಯ ಆರೋಪಿಯನ್ನು ಉರ್ವ ಠಾಣಾ ಪೊಲೀಸರು ಕೊಯಮತ್ತೂರಿನಲ್ಲಿ ಬಂಧಿಸಿದ್ದಾರೆ. ತಮಿಳುನಾಡಿನ ಕೊಯಮತ್ತೂರು ನಿವಾಸಿ ಪುಗಲ್ ವಾಸನ್ ಅಲಿಯಾಸ್ ಪುಗಲ್ ಹಸನ್ ಅಲಿಯಾಸ್ ಅರುಣ್ (50) ಬಂಧಿತ ಆರೋಪಿ.
ಘಟನೆಯ ವಿವರ: ಸ್ವರ್ಣ ಜ್ಯುವೆಲ್ಲರ್ಸ್ ಮಾಲೀಕ ಅಜಯ್ ರಾಮದಾಸ್ ನಾಯಕ್ ಅವರು ನೀಡಿದ ದೂರಿನನ್ವಯ ಈ ಕಾರ್ಯಾಚರಣೆ ನಡೆದಿದೆ. ಆರೋಪಿ ನವೆಂಬರ್ 22 ರಂದು ಜ್ಯುವೆಲ್ಲರಿ ಸಿಬ್ಬಂದಿಗೆ ಚಿನ್ನದ ಬಿಸ್ಕೆಟ್‌ಗಳನ್ನು ತನ್ನ ಕಚೇರಿಗೆ ತಲುಪಿಸುವಂತೆ ಸೂಚಿಸಿದ್ದನು. ಸಿಬ್ಬಂದಿ ಚಿನ್ನವನ್ನು ತಂದಾಗ, ಅವರನ್ನು ಕಟ್ಟಡದ 5ನೇ ಮಹಡಿಯಲ್ಲಿದ್ದ ಕೆಫೆಟೇರಿಯಾಕ್ಕೆ ಕರೆದೊಯ್ದ ಆರೋಪಿ, ಚಿನ್ನವನ್ನು ತನ್ನ ವಶಕ್ಕೆ ಪಡೆದುಕೊಂಡಿದ್ದನು. ಬಳಿಕ, 3ನೇ ಮಹಡಿಯಲ್ಲಿರುವ ತನ್ನ ಕಚೇರಿಯಿಂದ ಹಣ ಪಾವತಿಸುವುದಾಗಿ ನಂಬಿಸಿ ಅಲ್ಲಿಂದಲೇ ಪರಾರಿಯಾಗಿದ್ದನು. ಈ ಮೂಲಕ ಸುಮಾರು 31 ಲಕ್ಷ ರೂ. ಮೌಲ್ಯದ ಚಿನ್ನವನ್ನು ದೋಚಿದ್ದನು.
ಅಂತರರಾಜ್ಯ ವಂಚಕ: ಆರೋಪಿಯನ್ನು ಪತ್ತೆಹಚ್ಚಲು ವಿಶೇಷ ತಂಡ ರಚಿಸಿದ್ದ ಉರ್ವ ಪೊಲೀಸರು, ಆತನ ಜಾಡು ಹಿಡಿದು ಕೊಯಮತ್ತೂರಿಗೆ ತೆರಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ಈತ ಒಬ್ಬ ಪಕ್ಕಾ ವಂಚಕ ಎಂಬುದು ತಿಳಿದುಬಂದಿದೆ. ಮುಂಬೈ, ಹೈದರಾಬಾದ್, ಚಿತ್ತೂರು ಮತ್ತು ತಿರುಪತಿ ಸೇರಿದಂತೆ ವಿವಿಧೆಡೆ ನಕಲಿ ಹೆಸರುಗಳನ್ನು ಬಳಸಿ ಇಂತಹುದೇ ಕೃತ್ಯ ಎಸಗಿರುವ ಬಗ್ಗೆ ಪ್ರಕರಣಗಳು ದಾಖಲಾಗಿವೆ. ಬಂಧಿತನಿಂದ 31,04,000 ರೂ. ಮೌಲ್ಯದ 240 ಗ್ರಾಂ ತೂಕದ 24 ಕ್ಯಾರೆಟ್ ಚಿನ್ನದ ಬಿಸ್ಕೆಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರ ಮಾರ್ಗದರ್ಶನದಲ್ಲಿ, ಎಸಿಪಿ ಪ್ರತಾಪ್ ಸಿಂಗ್ ಥೋರಟ್ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ಶ್ಯಾಮ್ ಸುಂದರ್ ಎಚ್.ಎಂ ಮತ್ತು ಸಿಬ್ಬಂದಿ ವರ್ಗ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.






