Home State Politics National More
STATE NEWS

MS Umesh | ಕನ್ನಡದ ಹಿರಿಯ ನಟ `ಕಥಾಸಂಗಮ’ದ ತಿಮ್ಮರಾಯ ಇನ್ನಿಲ್ಲ!

Veteran kannada actor ms umesh passes away kidwai hospital bengaluru
Posted By: Sagaradventure
Updated on: Nov 30, 2025 | 8:07 AM

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ, ಮೈಸೂರು ಶ್ರೀಕಂಠಯ್ಯ ಉಮೇಶ್ (ಎಂ.ಎಸ್. ಉಮೇಶ್) ಅವರು ಭಾನುವಾರ ವಿಧಿವಶರಾಗಿದ್ದಾರೆ. ಕಳೆದ ಕೆಲವು ಸಮಯದಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ತಮ್ಮ 80ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಆರು ದಶಕಗಳ ಸುದೀರ್ಘ ಸಿನಿ ಪಯಣದಲ್ಲಿ 400ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿ, ಕನ್ನಡ ಕಲಾಭಿಮಾನಿಗಳನ್ನು ರಂಜಿಸಿದ್ದ ಹಿರಿಯ ಜೀವವೊಂದು ಮರೆಯಾಗಿದೆ.

ಬಿ.ಆರ್. ಪಂತುಲು ಅವರ ‘ಮಕ್ಕಳ ರಾಜ್ಯ’ ಚಿತ್ರದ ಮೂಲಕ ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ್ದ ಉಮೇಶ್, ತಮ್ಮ ವಿಶಿಷ್ಟ ಹಾಸ್ಯ ಪ್ರಜ್ಞೆ ಮತ್ತು ಮನೋಜ್ಞ ಪೋಷಕ ಪಾತ್ರಗಳಿಗೆ ಹೆಸರಾಗಿದ್ದರು. ವರನಟ ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಅನಂತ್ ನಾಗ್ ಸೇರಿದಂತೆ ಕನ್ನಡದ ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಂಡ ಹೆಗ್ಗಳಿಕೆ ಇವರದ್ದು. ‘ಗುರು ಶಿಷ್ಯರು’ ಮತ್ತು ‘ಗೋಲ್ಮಾಲ್ ರಾಧಾಕೃಷ್ಣ’ದಂತಹ ಚಿತ್ರಗಳಲ್ಲಿನ ಇವರ ಅಭಿನಯ ಇಂದಿಗೂ ಜನಪ್ರಿಯ.

ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ‘ಕಥಾಸಂಗಮ’ ಚಿತ್ರದ ‘ಮುನಿತಾಯಿ’ ಭಾಗದಲ್ಲಿನ ‘ತಿಮ್ಮರಾಯ’ನ ಪಾತ್ರ ಇವರಿಗೆ ರಾಜ್ಯಮಟ್ಟದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ತಂದುಕೊಟ್ಟಿತ್ತು. ಇದಲ್ಲದೆ 1994ರಲ್ಲಿ ನಾಟಕ ಅಕಾಡೆಮಿ ಪ್ರಶಸ್ತಿ ಹಾಗೂ ಮಹಾನಗರ ಪಾಲಿಕೆ ಪ್ರಶಸ್ತಿಗೂ ಇವರು ಭಾಜನರಾಗಿದ್ದರು. ಹಾಸ್ಯ ಮತ್ತು ಭಾವನಾತ್ಮಕ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದ ಉಮೇಶ್ ಅವರ ಅಗಲಿಕೆಗೆ ಸ್ಯಾಂಡಲ್‌ವುಡ್ ಕಂಬನಿ ಮಿಡಿದಿದೆ.

ಸಚಿವರಾದ ಶಿವರಾಜ್ ತಂಗಡಗಿ ಅವರು ಸಂತಾಪ ಸೂಚಿಸಿದ್ದು, “ಉಮೇಶ್ ಅವರಂತಹ ಅದ್ಭುತ ಕಲಾವಿದರನ್ನು ಕಳೆದುಕೊಂಡಿರುವುದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಅತ್ಯಂತ ಪ್ರತಿಭಾವಂತ ನಟರಾಗಿದ್ದ ಅವರು, ತಮ್ಮ ಅಭಿನಯದ ಮೂಲಕ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ,” ಎಂದು ಶೋಕ ವ್ಯಕ್ತಪಡಿಸಿದ್ದಾರೆ.

Shorts Shorts