ಬೆಂಗಳೂರು: ಖ್ಯಾತ ನಟಿ ಆಶಿಕಾ ರಂಗನಾಥ್ (Ashika Ranganath)ಅವರ ಮಾವನ ಮಗಳಾದ ಯುವತಿ ಅಚಲ ಅವರ ಆತ್ಮಹತ್ಯೆ ಪ್ರಕರಣ ಪೊಲೀಸರಿಗೆ ತಲೆನೋವಾಗಿದೆ. ಘಟನೆ ನಡೆದು 10 ದಿನಗಳು ಕಳೆದರೂ, ಆರೋಪಿಗಳ ಬಂಧನಕ್ಕೆ ಸಾಕ್ಷ್ಯಾಧಾರಗಳು (Evidence) ಇಲ್ಲದೆ ಪುಟ್ಟೇನಹಳ್ಳಿ ಪೊಲೀಸರು ಪರದಾಡುತ್ತಿದ್ದಾರೆ.
ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಹುಡುಕುತ್ತಿದ್ದ ಅಚಲ, ನವೆಂಬರ್ 21 ರಂದು ಬೆಂಗಳೂರಿನ ಪಾಂಡುರಂಗ ನಗರದಲ್ಲಿದ್ದ ಮಾವನ ಮನೆಯಲ್ಲಿ ನೇಣಿಗೆ ಶರಣಾಗಿದ್ದರು. ಅಚಲಳ ದೂರದ ಸಂಬಂಧಿ ಮಯಾಂಕ್ (Mayank)ಎಂಬಾತನೊಂದಿಗೆ ಸ್ನೇಹ ಬೆಳೆದಿತ್ತು. ಮದುವೆಯಾಗುವುದಾಗಿ ನಂಬಿಸಿ, ಮದುವೆಗೆ ಮೊದಲೇ ದೈಹಿಕ ಸಂಪರ್ಕಕ್ಕೆ ಪೀಡಿಸಿದ್ದ ಎಂದು ಆರೋಪಿಸಲಾಗಿದೆ.
ಇದಕ್ಕೆ ಒಪ್ಪದಿದ್ದಾಗ, ಡ್ರಗ್ ಅಡಿಕ್ಟ್ ಎನ್ನಲಾದ ಮಯಾಂಕ್, ಅಚಲಳ ಮೇಲೆ ಲೈಂಗಿಕ ಕಿರುಕುಳ ಹಾಗೂ ದೈಹಿಕ ಹಲ್ಲೆ ನಡೆಸಿದ್ದ. ಮಯಾಂಕ್‌ನ ಕಿರುಕುಳಕ್ಕೆ ನೊಂದೇ ಅಚಲ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಾವಿಗೆ ಮಯಾಂಕ್ ಮತ್ತು ಆತನ ತಾಯಿ ಕಾರಣರೆಂದು ದೂರು ದಾಖಲಿಸಲಾಗಿದೆ. ಈ ಕುರಿತು ಪುಟ್ಟೇನಹಳ್ಳಿ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.
ಸಾಕ್ಷ್ಯಾಧಾರಕ್ಕಾಗಿ ಸರ್ಕಸ್:
ಅಚಲ ಸಾವನ್ನಪ್ಪಿದ ಮನೆಯಲ್ಲಿ ಯಾವುದೇ ಡೆತ್ ನೋಟ್ (Death Note) ಪತ್ತೆಯಾಗಿಲ್ಲ. ಆತ್ಮಹತ್ಯೆಯ ದಿನ ಈ ಬಗ್ಗೆ ಯಾರಿಗೂ ಸಂದೇಶ ಸಹ ಕಳಿಸಿಲ್ಲ. ದೂರು ದಾಖಲಾದರೂ, ಆರೋಪಿಗಳ ಬಂಧನಕ್ಕೆ ಬಲವಾದ ಸಾಕ್ಷ್ಯಾಧಾರಗಳು ಸಿಕ್ಕಿಲ್ಲದ್ದರಿಂದ ಆರೋಪಿಗಳುನ್ನು ಬಂಧಿಸಲು ಸಾಧ್ಯವಾಗಿಲ್ಲ. ಪೊಲೀಸರು ಮೃತ ಅಚಲಳ ಮೊಬೈಲ್ ಅನ್ನು ಸೀಜ್ ಮಾಡಿ, ಡೇಟಾ ರಿಟ್ರೀವ್‌ಗಾಗಿ ರವಾನಿಸಿದ್ದಾರೆ. ಸದ್ಯ ಪೊಲೀಸರು ಮೊಬೈಲ್ ಡೇಟಾ ರಿಕವರಿಗಾಗಿ (Data Recovery) ಕಾಯುತ್ತಿದ್ದಾರೆ.
ಮೊಬೈಲ್‌ನಲ್ಲಿ ಮಯಾಂಕ್‌ನ ಕಿರುಕುಳಕ್ಕೆ ಸಂಬಂಧಿಸಿದ ಯಾವುದೇ ಸಾಕ್ಷ್ಯಾಧಾರಗಳು ಪತ್ತೆಯಾದಲ್ಲಿ, ಕೂಡಲೇ ಆರೋಪಿಗಳ ಬಂಧನಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿದುಬಂದಿದೆ.






