Home State Politics National More
STATE NEWS

Partagali ಮಠದಲ್ಲಿ ಅಹೋರಾತ್ರಿ ‘ಏಕಾದಶಿ ಎಕ್ಕಾ ಭಜನೆ’: ಪ್ರಧಾನಿ ಮೋದಿಗೂ ಉಪವಾಸದ ಕಿವಿಮಾತು ಹೇಳಿದ್ದ ಶ್ರೀಗಳು!

Gokarna math partagali ekadashi bhajana vidyadhish
Posted By: Sagaradventure
Updated on: Dec 1, 2025 | 10:37 AM

ಗೋವಾ: ಗೋವಾ ರಾಜ್ಯದ ಪರ್ತಗಾಳಿಯಲ್ಲಿರುವ ಐತಿಹಾಸಿಕ ಶ್ರೀ ಗೋಕರ್ಣ ಮಠದಲ್ಲಿ ಸೋಮವಾರ ಭಕ್ತಿಭಾವದ ಹೊಳೆ ಹರಿಯಿತು. ಮಠಾಧೀಶರಾದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮಿಯವರು ಸೋಮವಾರ ಬೆಳಿಗ್ಗೆ 7 ಗಂಟೆಗೆ ದೀಪ ಬೆಳಗಿಸುವ ಮೂಲಕ ಪವಿತ್ರ ‘ಏಕಾದಶಿ ಎಕ್ಕಾ ಭಜನೆ’ಗೆ ಚಾಲನೆ ನೀಡಿದರು.

ಮಠದ ಶ್ರೀ ರಾಮದೇವ ವೀರವಿಠ್ಠಲನ ಸನ್ನಿಧಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ ಭಜನಾ ತಂಡಗಳು ಪಾಲ್ಗೊಂಡಿದ್ದವು. ಪಾಳಿಯ ಪ್ರಕಾರ ಭಜನಾ ಸೇವೆ ಸಲ್ಲಿಸಿದ ತಂಡಗಳು, ಸೋಮವಾರ ಬೆಳಿಗ್ಗೆಯಿಂದ ಅಹೋರಾತ್ರಿ ಭಜನೆ ನಡೆಸಿಕೊಟ್ಟವು. ಬೆಳಿಗ್ಗೆ ಮಂಗಲ ಹಾಡುವ ಮೂಲಕ ಈ ಧಾರ್ಮಿಕ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ. ದೀಪದ ಸುತ್ತಲೂ ಹರಿಯ ನಾಮಸ್ಮರಣೆ ಮಾಡುತ್ತಾ ಭಜಕರು ಕುಣಿದು ಕುಪ್ಪಳಿಸಿದ್ದು, ಭಕ್ತಿಯ ಸಂಚಲನವನ್ನೇ ಮೂಡಿಸಿತು.

ಈ ಹಿಂದೆ ವಿಶ್ವದ ಅತಿ ಎತ್ತರದ ಶ್ರೀರಾಮನ ಪ್ರತಿಮೆ ಅನಾವರಣ ಸಮಾರಂಭಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶ್ರೀಮದ್ ವಿದ್ಯಾಧೀಶ ತೀರ್ಥರು ಮಹತ್ವದ ಸಲಹೆಯೊಂದನ್ನು ನೀಡಿದ್ದರು. “ನೀವು ನವರಾತ್ರಿ ಮತ್ತು ಶಿವರಾತ್ರಿ ವ್ರತಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೀರಿ. ಅದೇ ರೀತಿ ಏಕಾದಶಿ ಉಪವಾಸವನ್ನೂ ಆಚರಣೆ ಮಾಡಿ. ಇದರಿಂದ ನಿಮ್ಮ ಸಂಕಲ್ಪವಾದ ‘ವಿಕಸಿತ ಭಾರತ 2047’ರ ಕನಸು ಶೀಘ್ರವೇ ನನಸಾಗುತ್ತದೆ” ಎಂದು ಶ್ರೀಗಳು ಕಿವಿಮಾತು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಜಿಎಸ್‌ಬಿ ಸಮುದಾಯದಲ್ಲಿ ಏಕಾದಶಿ ಆಚರಣೆ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.

ಏಕಾದಶಿ ಉಪವಾಸವು ಕೇವಲ ಧಾರ್ಮಿಕ ಆಚರಣೆಯಲ್ಲ, ಅದಕ್ಕೆ ವೈಜ್ಞಾನಿಕ ಹಿನ್ನೆಲೆಯೂ ಇದೆ. ಈ ವ್ರತವು ಪಾಪಗಳನ್ನು ನಾಶಪಡಿಸಿ, ಮೋಕ್ಷ ಪ್ರಾಪ್ತಿಗೆ ಮತ್ತು ವಿಷ್ಣು ಹಾಗೂ ಕೃಷ್ಣನ ಅನುಗ್ರಹಕ್ಕೆ ಪಾತ್ರವಾಗಲು ಸಹಕಾರಿ ಎಂಬ ನಂಬಿಕೆ ಇದೆ. ವೈಜ್ಞಾನಿಕವಾಗಿ ನೋಡುವುದಾದರೆ, ಉಪವಾಸ ಮಾಡುವುದರಿಂದ ದೇಹದ ಕೊಬ್ಬು ಕರಗುತ್ತದೆ, ಜೀರ್ಣಾಂಗ ವ್ಯವಸ್ಥೆಗೆ ಅಗತ್ಯ ವಿಶ್ರಾಂತಿ ದೊರೆತು ಮನಸ್ಸಿಗೂ ಮುದ ನೀಡುತ್ತದೆ.

ಜಿಎಸ್‌ಬಿ ಸಮುದಾಯವು ಈ ವ್ರತವನ್ನು ಶ್ರದ್ಧಾಭಕ್ತಿಯಿಂದ ಪಾಲಿಸುತ್ತಿದ್ದು, ಏಕಾದಶಿಯ ಮೊದಲ ದಿನ ರಾತ್ರಿ ಲಘು ಉಪಹಾರ ಸೇವಿಸಿ, ಏಕಾದಶಿಯಂದು ಉಪವಾಸವಿದ್ದು, ದ್ವಾದಶಿಯಂದು ಬೆಳಿಗ್ಗೆ ಉಪವಾಸ ಮುಕ್ತಾಯ ಮಾಡುವ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬರುತ್ತಿದೆ.

Shorts Shorts