ಬೆಂಗಳೂರು: ನಗರದ ಶಾಲೆಗಳಲ್ಲಿ ವಿದ್ಯಾರ್ಥಿಗಳು ಕದ್ದುಮುಚ್ಚಿ ಮೊಬೈಲ್ ಫೋನ್ ತರುತ್ತಾರೆ ಎಂಬ ದೂರಿನ ಮೇರೆಗೆ ತಪಾಸಣೆಗೆ ಇಳಿದ ಶಾಲಾ ಸಿಬ್ಬಂದಿಗೆ ಆಘಾತಕಾರಿ ಸಂಗತಿಗಳು ಬಯಲಾಗಿವೆ. ಮಕ್ಕಳ ಸ್ಕೂಲ್ ಬ್ಯಾಗ್ ಪರಿಶೀಲಿಸಿದಾಗ ಕೇವಲ ಮೊಬೈಲ್ ಅಷ್ಟೇ ಅಲ್ಲ, ಊಹೆಯೇ ಮಾಡದಂತಹ ವಸ್ತುಗಳು ಪತ್ತೆಯಾಗಿವೆ.
ಬ್ಯಾಗ್‌ನಲ್ಲಿ ಏನಿತ್ತು?
ನಗರದ ಕೆಲವು ಶಾಲೆಗಳಲ್ಲಿ 8, 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳ ಬ್ಯಾಗ್‌ಗಳನ್ನು ಜಾಲಾಡಿದಾಗ, ಅದರಲ್ಲಿ ಸಿಗರೇಟ್, ಲೈಟರ್, ವೈಟ್ನರ್ ಹಾಗೂ ಅಪಾರ ಪ್ರಮಾಣದ ನಗದು ಹಣ ಸಿಕ್ಕಿದೆ. ಎಲ್ಲಕ್ಕಿಂತ ಆಘಾತಕಾರಿ ವಿಷಯವೆಂದರೆ, ಹದಿಹರೆಯದ ವಿದ್ಯಾರ್ಥಿಗಳ ಬ್ಯಾಗ್‌ನಲ್ಲಿ ಕಾಂಡೋಮ್‌ಗಳು ಮತ್ತು ಗರ್ಭನಿರೋಧಕ ಮಾತ್ರೆಗಳು (Contraceptive pills) ಪತ್ತೆಯಾಗಿವೆ. 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳ ಬ್ಯಾಗ್‌ನಲ್ಲೂ ಕಾಂಡೋಮ್ ಸಿಕ್ಕಿದೆ ಎಂದು ಪ್ರಾಂಶುಪಾಲರೊಬ್ಬರು ತಿಳಿಸಿದ್ದಾರೆ.
ಪೋಷಕರಿಗೆ ಶಾಕ್, ಕೌನ್ಸೆಲಿಂಗ್‌ಗೆ ಸಲಹೆ
ಕರ್ನಾಟಕ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ಕಾಮ್ಸ್) ನೀಡಿದ ಸೂಚನೆಯಂತೆ ಈ ತಪಾಸಣೆ ನಡೆಸಲಾಗಿತ್ತು. ಈ ಘಟನೆಯ ನಂತರ ಶಾಲೆಗಳಲ್ಲಿ ಪೋಷಕರು ಮತ್ತು ಶಿಕ್ಷಕರ ವಿಶೇಷ ಸಭೆಗಳನ್ನು ನಡೆಸಲಾಗಿದೆ. ವಿಷಯ ತಿಳಿದ ಪೋಷಕರು ಆಘಾತಕ್ಕೊಳಗಾಗಿದ್ದು, ತಮ್ಮ ಮಕ್ಕಳ ವರ್ತನೆಯಲ್ಲಿನ ಹಠಾತ್ ಬದಲಾವಣೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತ ಶಾಲಾ ಆಡಳಿತ ಮಂಡಳಿಗಳು, ವಿದ್ಯಾರ್ಥಿಗಳನ್ನು ಅಮಾನತು (Suspension) ಮಾಡುವ ಬದಲು ಅವರಿಗೆ ಸೂಕ್ತ ಮಾರ್ಗದರ್ಶನದ ಅಗತ್ಯವಿದೆ ಎಂದು ನಿರ್ಧರಿಸಿವೆ. ಹೀಗಾಗಿ, ಹೊರಗಿನ ತಜ್ಞರಿಂದ ಮಕ್ಕಳಿಗೆ ‘ಕೌನ್ಸೆಲಿಂಗ್’ (ಆಪ್ತ ಸಮಾಲೋಚನೆ) ಕೊಡಿಸುವಂತೆ ಪೋಷಕರಿಗೆ ಸಲಹೆ ನೀಡಲಾಗಿದೆ. ಇದಕ್ಕಾಗಿ ವಿದ್ಯಾರ್ಥಿಗಳಿಗೆ ಒಂದು ವಾರದಿಂದ 10 ದಿನಗಳವರೆಗೆ ರಜೆಯನ್ನೂ ನೀಡಲಾಗಿದೆ ಎಂದು ನಾಗರಬಾವಿಯ ಶಾಲೆಯ ಪ್ರಾಂಶುಪಾಲರು ತಿಳಿಸಿದ್ದಾರೆ.






