ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K. Shivakumar) ನಡುವಿನ ಹೊಂದಾಣಿಕೆಯ ಕುರಿತು ಹೈಕಮಾಂಡ್ (High Command) ‘ಬ್ರೇಕ್‌ಫಾಸ್ಟ್ ಮೀಟಿಂಗ್’ ಸೂತ್ರವನ್ನು ಮುಂದುವರೆಸಿದೆ. ಕಳೆದ ಶನಿವಾರ ಸಿಎಂ ನಿವಾಸದಲ್ಲಿ ಉಪಾಹಾರ ಸಭೆ ನಡೆಸಿದ್ದ ಉಭಯ ನಾಯಕರು, ಇಂದು (ಮಂಗಳವಾರ) ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನಿವಾಸದಲ್ಲಿ ಎರಡನೇ ಸುತ್ತಿನ ಉಪಾಹಾರ ಸಭೆ ನಡೆಸುತ್ತಿದ್ದಾರೆ.
ಇಂದು ಡಿ.ಕೆ. ಶಿವಕುಮಾರ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಉಪಾಹಾರಕ್ಕಾಗಿ ಆಹ್ವಾನಿಸಿದ್ದಾರೆ. ಸಿಎಂ ಅವರಿಗೆ ಪ್ರಿಯವಾದ ನಾಟಿ ಕೋಳಿ ಸಾರು, ಜೊತೆಗೆ ಇಡ್ಲಿ, ವಡೆ, ಉಪ್ಪಿಟ್ಟು ಸೇರಿದಂತೆ ವಿವಿಧ ತಿಂಡಿಗಳನ್ನು ತಯಾರಿಸಲಾಗಿದ್ದು, ಇಬ್ಬರು ನಾಯಕರು ಒಟ್ಟಾಗಿ ಬ್ರೇಕ್‌ಫಾಸ್ಟ್ ಮಾಡುತ್ತಾ ಮಾತುಕತೆ ನಡೆಸುತ್ತಿದ್ದಾರೆ.
ಸಿಎಂ ನಿವಾಸದಲ್ಲಿ ಒಂದು ಸಭೆ, ಡಿಸಿಎಂ ನಿವಾಸದಲ್ಲಿ ಮತ್ತೊಂದು ಸಭೆ ನಡೆಸುವ ಮೂಲಕ, ‘ಸಿಎಂ ಹೆಚ್ಚಲ್ಲ, ಡಿಸಿಎಂ ಕಡಿಮೆಯಲ್ಲ’ ಎಂಬ ಸಮಾನತೆ ಸೂತ್ರವನ್ನು ವರಿಷ್ಠರು ಯಶಸ್ವಿಯಾಗಿ ಜಾರಿಗೆ ತಂದಿದ್ದಾರೆ. ಪಕ್ಷದಲ್ಲಿನ ಗೊಂದಲಕ್ಕೆ ತೆರೆ ಎಳೆದು, ಉಭಯ ನಾಯಕರಿಂದ ಒಗ್ಗಟ್ಟಿನ ಸಂದೇಶ ನೀಡುವಲ್ಲಿ ಹೈಕಮಾಂಡ್ ಯಶಸ್ವಿಯಾಗಿದೆ.
ಸಿಎಂ, ಡಿಸಿಎಂ ಬ್ರೇಕ್ ಫಾಸ್ಟ್ ಬಳಿಕ ಮುಂದೇನು?
ಎರಡು ದಿನಗಳ ಕಾಲ ನಡೆದ ಈ ಹೈ-ಪ್ರೊಫೈಲ್ ಬ್ರೇಕ್‌ಫಾಸ್ಟ್ ಸಭೆಗಳು ಮುಂದಿನ ರಾಜಕೀಯ ನಡೆಗಳ ಬಗ್ಗೆ ಕುತೂಹಲ ಮೂಡಿಸಿದ್ದು, ಉಭಯ ನಾಯಕರು ಒಗ್ಗಟ್ಟಿನ ಸಂದೇಶ ನೀಡಿದಾಗಿದೆ. ಹಾಗೂ ಶೀಘ್ರದಲ್ಲೇ ವರಿಷ್ಠರು ಸಿಎಂ ಮತ್ತು ಡಿಸಿಎಂ ಇಬ್ಬರನ್ನೂ ದೆಹಲಿಗೆ ಕರೆಸಿಕೊಳ್ಳುವ ಸಾಧ್ಯತೆ ಇದೆ ಎಂಬ ಚರ್ಚೆ ನಡೆಯುತ್ತಿದೆ. ಮತ್ತು ಪಕ್ಷದ ನಾಯಕರ ಸಮ್ಮುಖದಲ್ಲಿ ಈ ನಾಯಕರಿಗಾಗಿ ಒಂದು ದೀರ್ಘಕಾಲೀನ ಸಂಧಾನ ಸೂತ್ರ ಸಿದ್ಧಪಡಿಸಲಿದೆಯಾ ಎಂಬ ನಿರೀಕ್ಷೆಯೂ ಇದೆ.






