ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K. Shivakumar) ಅವರಿಗೆ ಮುಖ್ಯಮಂತ್ರಿ (CM) ಸ್ಥಾನ ಯಾವಾಗ ಸಿಗುತ್ತದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಅತ್ಯಂತ ಕುತೂಹಲ ಕೆರಳಿಸುವ ಉತ್ತರ ನೀಡಿದ್ದಾರೆ.
ಡಿ.ಕೆ. ಶಿವಕುಮಾರ್ ಅವರ ನಿವಾಸದಲ್ಲಿ ಎರಡನೇ ಸುತ್ತಿನ ಬ್ರೇಕ್‌ಫಾಸ್ಟ್ ಸಭೆ ಮುಗಿದ ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ, ಡಿಕೆಶಿಗೆ ಸಿಎಂ ಪಟ್ಟ ಯಾವಾಗ ಒಲಿಯುತ್ತದೆ? ಎಂಬ ಮಾಧ್ಯಮದವರ ಪ್ರಶ್ನೆಗೆ, ಹೈಕಮಾಂಡ್ (High Command) ಯಾವಾಗ ಹೇಳುತ್ತದೋ, ಆಗ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗ್ತಾರೆ ಎಂದು ಹೇಳಿದರು.
ಬೆಂಬಲಿಗರಲ್ಲಿ ಹೆಚ್ಚಿದ ಕುತೂಹಲ:
ಸಿಎಂ ಸಿದ್ದರಾಮಯ್ಯ ಅವರ ಈ ಹೇಳಿಕೆ ತಕ್ಷಣಕ್ಕೆ ಸಿಎಂ ಸ್ಥಾನ ಬದಲಾವಣೆ ಇಲ್ಲ ಎಂಬ ಸೂಚನೆ ನೀಡಿದರೂ, ‘ಹೈಕಮಾಂಡ್ ಹೇಳಿದಾಗ’ ಎಂಬ ಪದಬಳಕೆ ಡಿ.ಕೆ. ಶಿವಕುಮಾರ್ ಅವರ ಬೆಂಬಲಿಗರಲ್ಲಿ ಹೊಸ ಕುತೂಹಲ ಮೂಡಿಸಿದೆ. ಸದ್ಯಕ್ಕೆ ಡಿಕೆಶಿಗೆ ಸಿಎಂ ಸ್ಥಾನ ಸಿಗುತ್ತಾ, ಇಲ್ವಾ ಎಂಬ ಪ್ರಶ್ನೆಗೆ ಸಿಎಂ ನೇರ ಉತ್ತರ ನೀಡದೆ ಹೈಕಮಾಂಡ್ ಕಡೆ ಬೊಟ್ಟು ಮಾಡಿರುವುದು, ಭವಿಷ್ಯದಲ್ಲಿ ಅಧಿಕಾರ ಹಸ್ತಾಂತರದ ಸಾಧ್ಯತೆಯನ್ನು ಜೀವಂತವಾಗಿಟ್ಟಿದೆ.
ಇತ್ತೀಚೆಗೆ ಡಿ.ಕೆ. ಸುರೇಶ್ ಅವರು ಎರಡೂವರೆ ವರ್ಷದ ಅಧಿಕಾರ ಹಂಚಿಕೆ ಸೂತ್ರವನ್ನು ನೆನಪಿಸಿದ ಬೆನ್ನಲ್ಲೇ, ಸಿಎಂ ನೀಡಿರುವ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಚರ್ಚೆ ಹುಟ್ಟುಹಾಕಿದೆ.






