ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ನಡುವಿನ ‘ಬ್ರೇಕ್‌ಫಾಸ್ಟ್ ಮೀಟಿಂಗ್’ನಲ್ಲಿ ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆ ಕುರಿತು ಗೌಪ್ಯ ಚರ್ಚೆ ನಡೆದಿದೆ ಎನ್ನಲಾಗಿದೆ. ಉಪಾಹಾರ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಪರವಾಗಿ ಅವರ ಸಹೋದರ ಮತ್ತು ಮಾಜಿ ಸಂಸದ ಡಿ.ಕೆ. ಸುರೇಶ್ (D.K. Suresh) ಅವರು ಸಿಎಂ ಮುಂದೆ ಮನವಿ ಮಾಡಿದ್ದಾರೆ ಎಂಬ ಎಕ್ಸ್‌ಕ್ಲೂಸಿವ್ ಮಾಹಿತಿ ಲಭ್ಯವಾಗಿದೆ.
ಡಿಸಿಎಂ(DCM) ನಿವಾಸದಲ್ಲಿ ನಡೆದ ಬ್ರೇಕ್‌ಫಾಸ್ಟ್ (Breakfast) ಸಭೆಯಲ್ಲಿ ಡಿ.ಕೆ. ಸುರೇಶ್ ಅವರು ನೇರವಾಗಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿ, ಸಾರ್, ಎರಡೂವರೆ ವರ್ಷ ಆಗಿದೆ, ಯೋಚನೆ ಮಾಡಿ. ಡಿಕೆಶಿ ಅವರಿಗೆ ಅವಕಾಶ ಮಾಡಿಕೊಡಿ. ಪಕ್ಷಕ್ಕಾಗಿ ಡಿ.ಕೆ. ಶಿವಕುಮಾರ್ ಅವರು ಏನೆಲ್ಲಾ ತ್ಯಾಗ ಮಾಡಿದ್ದಾರೆ ಗೊತ್ತಲ್ಲವಾ ನಿಮಗೆ? ಇದೊಂದು ಅವಕಾಶ ಮಾಡಿ. ನಿಮ್ಮ ಜೊತೆ ನಾವಿಬ್ರೂ ಇರುತ್ತೇವೆ.
ಹೈಕಮಾಂಡ್ ಮುಂದೆಯೇ ಅಂದು ನೀವು ಒಪ್ಪಿಕೊಂಡಿದ್ರಿ ಅಲ್ವಾ, ಉಳಿದ ಎರಡೂವರೆ ವರ್ಷ ಡಿಕೆಶಿ ಅವರಿಗೆ ಕೊಡಿ ಅಂತಾ,” ಎಂದು ಡಿ.ಕೆ. ಸುರೇಶ್ ಅವರು ಸಿಎಂಗೆ ಕೊಟ್ಟ ಮಾತನ್ನು ನೆನಪಿಸಿದ್ದಾರೆ ಎನ್ನಲಾಗಿದೆ.
ಈ ಬ್ರೇಕ್‌ಫಾಸ್ಟ್ ಮೀಟಿಂಗ್‌ಗಳನ್ನು ಒಗ್ಗಟ್ಟಿನ ಪ್ರದರ್ಶನಕ್ಕಾಗಿ ನಡೆಸಲಾಗಿದ್ದರೂ, ಡಿ.ಕೆ. ಸುರೇಶ್ ಅವರು ಈ ಸಂದರ್ಭವನ್ನು ಸಿಎಂ ಬದಲಾವಣೆ ವಿಷಯವನ್ನು ಪ್ರಸ್ತಾಪಿಸಲು ಬಳಸಿಕೊಂಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.






