ಬೆಂಗಳೂರು/ಹುಬ್ಬಳ್ಳಿ: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (HESCOM – ಹೆಸ್ಕಾಂ) ನಲ್ಲಿ ಬರೋಬ್ಬರಿ 80 ರಿಂದ 90 ಕೋಟಿ ರೂಪಾಯಿಗಳ ಟ್ರಾನ್ಸ್‌ಫಾರ್ಮರ್ ಹಗರಣ ನಡೆದಿರುವುದು ಸಿಐಡಿ ತನಿಖೆಯಲ್ಲಿ ದೃಢಪಟ್ಟಿದೆ. ಟ್ರಾನ್ಸ್‌ಫಾರ್ಮರ್‌ಗಳನ್ನು ವಾಸ್ತವವಾಗಿ ಅಳವಡಿಸದಿದ್ದರೂ, ದಾಖಲೆಗಳಲ್ಲಿ ಸುಳ್ಳು ಲೆಕ್ಕ ತೋರಿಸಿ ಭಾರಿ ಮೊತ್ತದ ಹಣವನ್ನು ಲೂಟಿ ಮಾಡಲಾಗಿದೆ ಎಂಬ ಗಂಭೀರ ಆರೋಪದ ಮೇಲೆ ಸಿಐಡಿ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ.
1500 ಟ್ರಾನ್ಸ್‌ಫಾರ್ಮರ್‌ಗಳ ಮಿಸ್ಸಿಂಗ್
ಗ್ರಾಮೀಣ ಭಾಗದ ರೈತರು ಹಾಗೂ ಜನರ ಬೇಡಿಕೆಗಳನ್ನು ಪೂರೈಸಲು ಇಂಧನ ಇಲಾಖೆಯು ಸುಮಾರು 1500 ಟ್ರಾನ್ಸ್‌ಫಾರ್ಮರ್‌ಗಳ ಖರೀದಿಗೆ ಅನುಮತಿ ನೀಡಿತ್ತು. ಆದರೆ, ಈ ಟ್ರಾನ್ಸ್‌ಫಾರ್ಮರ್‌ಗಳನ್ನು ಜನರಿಗೆ ವಿತರಿಸಿದಂತೆ ನಕಲಿ ದಾಖಲೆ ಸೃಷ್ಟಿಸಿ ಹೆಸ್ಕಾಂನ ಕೆಲ ಅಧಿಕಾರಿಗಳು ಹಣ ನುಂಗಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
‘ರಾಮನ ಲೆಕ್ಕ ಕೃಷ್ಣನ ಲೆಕ್ಕ’ದ ಮೋಸ:
ತನಿಖಾ ಮೂಲಗಳ ಪ್ರಕಾರ, ಹೆಸ್ಕಾಂ ಅಧಿಕಾರಿಗಳು ಟ್ರಾನ್ಸ್‌ಫಾರ್ಮರ್ ವಿತರಣೆಯಲ್ಲಿ ‘ರಾಮನ ಲೆಕ್ಕ ಕೃಷ್ಣನ ಲೆಕ್ಕ’ ತೋರಿಸಿದ್ದಾರೆ. ಅಂದರೆ, ನಗರ ಪ್ರದೇಶಕ್ಕೆ ವಿತರಿಸಿದ ಲೆಕ್ಕ ಕೇಳಿದರೆ, ಗ್ರಾಮೀಣ ಭಾಗದ ವಿವರ ನೀಡಿ, ಕೃಷಿಕರಿಗೆ ವಿತರಿಸಿದ ಟ್ರಾನ್ಸ್‌ಫಾರ್ಮರ್ ವಿವರ ಕೇಳಿದರೆ ನಗರದ ಲೆಕ್ಕ ಕೊಟ್ಟು ಇಲಾಖೆಗೆ ವಂಚಿಸಿರುವುದು ಸಿಐಡಿ ಪರಿಶೀಲನೆಯಲ್ಲಿ ಸ್ಪಷ್ಟವಾಗಿದೆ. ದಾಸ್ತಾನು ವಿಭಾಗದ ಮೇಲ್ವಿಚಾರಕ ಸೇರಿ ಹಿರಿಯ ಅಧಿಕಾರಿಗಳು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ.
ಕಿಕ್‌ಬ್ಯಾಕ್ ಆರೋಪ, ಭ್ರಷ್ಟಾಚಾರ ಕಾಯ್ದೆ ಅನ್ವಯ ತನಿಖೆ
ಈ ಹಗರಣದಲ್ಲಿ 9ಕ್ಕೂ ಹೆಚ್ಚು ಖಾಸಗಿ ಕಂಪನಿಗಳೊಂದಿಗೆ ಹೆಸ್ಕಾಂ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ತನಿಖಾ ಸಂಸ್ಥೆ ಶಂಕಿಸಿದೆ. ಈ ಪೈಕಿ ಒಂದು ಕಂಪನಿ ಗುತ್ತಿಗೆ ಪಡೆದಿದ್ದರೆ, ಉಳಿದ ಕಂಪನಿಗಳು ಉಪಗುತ್ತಿಗೆ ಮೂಲಕ ಪರಿಕರಗಳನ್ನು ಪೂರೈಸಿದ್ದವು ಎನ್ನಲಾಗಿದೆ.
ಅಕ್ರಮದಲ್ಲಿ ಅಧಿಕಾರಿಗಳು ‘ಕಿಕ್‌ಬ್ಯಾಕ್’ ಪಡೆದಿರುವುದು ಕಂಡುಬಂದಿರುವುದರಿಂದ, ಆರೋಪಿತ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ (Prevention of Corruption Act) ತನಿಖೆ ನಡೆಸಲು ಸಿಐಡಿ ಮುಂದಾಗಿದೆ.
ಸದ್ಯ ಟ್ರಾನ್ಸ್‌ಫಾರ್ಮರ್ ಹಗರಣದ ಕುರಿತು ಮತ್ತಷ್ಟು ಅಗತ್ಯ ದಾಖಲೆಗಳನ್ನು ಒದಗಿಸುವಂತೆ ಸಿಐಡಿ ಅಧಿಕಾರಿಗಳು ಹೆಸ್ಕಾಂಗೆ ಸೂಚಿಸಿದ್ದಾರೆ. ದಾಖಲೆಗಳ ಸಲ್ಲಿಕೆಯ ನಂತರ, ಪ್ರಕರಣಕ್ಕೆ ಸಂಬಂಧಿಸಿದ ತಪ್ಪಿತಸ್ಥ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿ, ಅವರನ್ನು ವಿಚಾರಣೆ ನಡೆಸಲಾಗುತ್ತದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಹಗರಣ ಬಯಲಾದ ಹಾದಿ
- 2023: ಹೆಸ್ಕಾಂಗೆ ಪೂರೈಕೆಯಾಗಿದ್ದ ಟ್ರಾನ್ಸ್‌ಫಾರ್ಮರ್‌ಗಳಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳು ಕೇಳಿ ಬಂದವು.
- 2024: ಇಂಧನ ಇಲಾಖೆಯ ಸೂಚನೆಯ ಮೇರೆಗೆ ಹೆಸ್ಕಾಂ ಆಂತರಿಕ ಲೆಕ್ಕಪರಿಶೋಧನೆ ನಡೆಸಿದಾಗ ಅಕ್ರಮ ಬಯಲಾಯಿತು.
- ದೂರು: ಹೆಸ್ಕಾಂ ಅಧಿಕಾರಿಗಳು ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
- ಸಿಐಡಿ ಹೆಗಲಿಗೆ: ರಾಜ್ಯ ಸರ್ಕಾರವು ಈ ಹಗರಣದ ಗಂಭೀರತೆಯನ್ನು ಮನಗಂಡು ತನಿಖೆಯನ್ನು ಸಿಐಡಿಗೆ ವಹಿಸಿತ್ತು.






