ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K. Shivakumar) ಅವರ ನಿವಾಸದಲ್ಲಿ ಎರಡನೇ ಸುತ್ತಿನ ಬ್ರೇಕ್‌ಫಾಸ್ಟ್ ಸಭೆ (breakfast meeting) ನಡೆಸಿದ ಬಳಿಕ, ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ, ಪಕ್ಷ ಮತ್ತು ಸರ್ಕಾರದ ಕುರಿತು ಸ್ಪಷ್ಟನೆ ನೀಡಿದರು.
ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಡಿ.ಕೆ. ಶಿವಕುಮಾರ್ ಕರೆದಿದ್ದಕ್ಕೆ ನಾನು ಅವರ ಮನೆಗೆ ಬಂದಿದ್ದೇನೆ. ನಾವಿಬ್ಬರೂ ಒಟ್ಟಿಗೆ ಬ್ರೇಕ್‌ಫಾಸ್ಟ್ ಮಾಡಿದ್ದೇವೆ ಮತ್ತು ಪಕ್ಷದ ಕುರಿತು ಚರ್ಚೆ ನಡೆಸಿದ್ದೇವೆ. ಇವರ ಮನೆಯಲ್ಲಿ ನಾನ್‌ವೆಜ್ (Naati Koli), ನನ್ನ ಮನೆಯಲ್ಲಿ ವೆಜ್ ಇತ್ತು. ಡಿಕೆಶಿ ನಾನ್‌ವೆಜ್ ತಿನ್ನಲ್ಲ, ನಾನು ತಿನ್ನುತ್ತೇನೆ. ನಾನೇ ಹಳ್ಳಿಯಿಂದ ನಾಟಿಕೋಳಿ ತರುವಂತೆ ಹೇಳಿದ್ದೆ ಎಂದರು.
ಡಿಸೆಂಬರ್ 8 ರಿಂದ ಆರಂಭವಾಗುವ ಅಧಿವೇಶನದ (Assembly Session) ಹಿನ್ನೆಲೆಯಲ್ಲಿ ವಿಪಕ್ಷಗಳು ಯಾವುದೇ ವಿಚಾರ ಪ್ರಸ್ತಾಪಿಸಿದರೂ ಅದನ್ನು ಎದುರಿಸುವ ಕುರಿತು ಚರ್ಚೆ ಮಾಡಿದ್ದೇವೆ.
ನಾನು, ಡಿ.ಕೆ. ಶಿವಕುಮಾರ್ ಬ್ರದರ್ಸ್. ನಾವು ಒಂದೇ ಪಕ್ಷ, ಒಂದೇ ಸಿದ್ಧಾಂತ ಹೊಂದಿದ್ದೇವೆ. ನಾವು ಯಾವಾಗಲೂ ಒಗ್ಗಟ್ಟಾಗಿ ಇದ್ದೇವೆ. ಹೈಕಮಾಂಡ್ ಹೇಳಿದಂತೆ ನಾನು, ಡಿಸಿಎಂ ನಡೆದುಕೊಳ್ಳುತ್ತೇವೆ. ಹೈಕಮಾಂಡ್ ಹೇಳಿದಂತೆ ಕೇಳಬೇಕೆಂದು ಮೊನ್ನೆಯೂ ಚರ್ಚೆ ಮಾಡಿದ್ದೀವಿ, ಇಂದು ಕೂಡ ಚರ್ಚೆ ಮಾಡಿದ್ದೇವೆ. ಹೈಕಮಾಂಡ್ (High Command) ಭೇಟಿಗೆ ಸಮಯ ಸಿಕ್ಕರೆ ಭೇಟಿಯಾಗ್ತೇವೆ ಎಂದು ಹೇಳಿದರು.
ಇದೇ ವೇಳೆ ಕಬ್ಬಿಗೆ ಬೆಲೆ ನಿಗದಿ ವಿಚಾರದ ಬಗ್ಗೆ ಮಾತನಾಡಿ, ಕಬ್ಬು ಮತ್ತು ಮೆಕ್ಕೆಜೋಳಕ್ಕೆ ಬೆಲೆ ನಿಗದಿ ವಿಚಾರವಾಗಿ ಮಾತನಾಡಿದ ಸಿಎಂ, ರೈತರು ಎಂಎಸ್‌ಪಿ (MSP) ನಿಗದಿ ಮಾಡುವಂತೆ ಪಟ್ಟು ಹಿಡಿದಿದ್ದಾರೆ. ಎಂಎಸ್‌ಪಿ, ಎಫ್‌ಆರ್‌ಪಿ ನಿಗದಿ ಮಾಡೋದು ಕೇಂದ್ರ ಸರ್ಕಾರ (Central Government). ಹೀಗಾಗಿ, ಈ ಬಗ್ಗೆ ಸಂಸದರ ಮೀಟಿಂಗ್ ಕರೆಯಬೇಕು ಎಂದು ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಹೇಳಿಕೆ
ಡಿಸಿಎಂ ಅವರು ಮಾತನಾಡಿ, ನಮ್ಮ ಮನೆಯಲ್ಲಿ ಸಿಎಂ ಉಪಹಾರ ಸೇವಿಸಿದ್ದಾರೆ. ನಾವು ಮೊದಲಿಂದಲೂ ಒಗ್ಗಟ್ಟಿನಿಂದಲೇ ಇದ್ದೇವೆ. ನಾವಿಬ್ಬರೂ ಒಗ್ಗಟ್ಟಾಗಿದ್ದೇವೆ. ಭಿನ್ನಾಭಿಪ್ರಾಯ ಬರುವ ಪ್ರಶ್ನೆಯೇ ಇಲ್ಲ. ಬ್ರೇಕ್‌ಫಾಸ್ಟ್ ವೇಳೆ ಪಕ್ಷ ಮತ್ತು ಸರ್ಕಾರದ ವಿಚಾರ, ಸದನದಲ್ಲಿ ವಿಪಕ್ಷಗಳನ್ನು ಎದುರಿಸುವ ರೀತಿ, ಮತ್ತು ಪರಿಷತ್ ಸ್ಥಾನದ ಬಗ್ಗೆಯೂ ಚರ್ಚೆ ಮಾಡಿದ್ದೇವೆ.ರಾಜ್ಯದ ಸಮಸ್ಯೆಗಳ ಕುರಿತು ಕೇಂದ್ರದ ಬಳಿ ವಿಪಕ್ಷ ನಾಯಕರನ್ನು ಕರೆದೊಯ್ಯುವ ಸರ್ವಪಕ್ಷ ಸಭೆಯ ಬಗ್ಗೆಯೂ ಚರ್ಚೆ ಮಾಡಿದ್ದೇವೆ ಎಂದರು.
ನಬ್ಬಿಬ್ಬರದು ಒಂದೇ ಧ್ವನಿ, ಒಂದೇ ಆಚಾರ-ವಿಚಾರ ಹೊಂದಿದ್ದೇವೆ. ಹೈಕಮಾಂಡ್ ನಿರ್ಧಾರವನ್ನು ನಾವು ಒಪ್ಪಿಕೊಳ್ತೇವೆ. ನಾವು ಬೇರೆಯಾಗಿಲ್ಲ… ಮಾಧ್ಯಮಗಳು ಬೇರೆ ಮಾಡುತ್ತಿವೆ ಎಂದು ಸ್ಪಷ್ಟನೆ ನೀಡಿದರು.






