ಬೆಂಗಳೂರು: ಯೆಜ್ಡಿ (Yezdi) ಬೈಕ್ ಪ್ರಿಯರಿಗೆ ಮತ್ತು ಕ್ಲಾಸಿಕ್ ಲೆಜೆಂಡ್ಸ್ ಸಂಸ್ಥೆಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ‘ಯೆಜ್ಡಿ’ ಟ್ರೇಡ್‌ಮಾರ್ಕ್ ಬಳಸದಂತೆ ಕ್ಲಾಸಿಕ್ ಲೆಜೆಂಡ್ಸ್ ಕಂಪನಿಯ ಮೇಲೆ ಹೇರಲಾಗಿದ್ದ ನಿರ್ಬಂಧವನ್ನು ಕರ್ನಾಟಕ ಹೈಕೋರ್ಟ್ ತೆರವುಗೊಳಿಸಿದೆ. ನವೆಂಬರ್ 27 ರಂದು ನೀಡಿದ ಮಹತ್ವದ ತೀರ್ಪಿನಲ್ಲಿ, ಹೈಕೋರ್ಟ್‌ನ ವಿಭಾಗೀಯ ಪೀಠವು 2022ರ ಹಿಂದಿನ ಆದೇಶವನ್ನು ರದ್ದುಗೊಳಿಸಿದೆ.
ಏನಿದು ವಿವಾದ?
ಮೂಲತಃ ಯೆಜ್ಡಿ ಬ್ರ್ಯಾಂಡ್ ಮೈಸೂರು ಮೂಲದ ಐಡಿಯಲ್ ಜಾವಾ (ಇಂಡಿಯಾ) ಲಿಮಿಟೆಡ್‌ಗೆ ಸೇರಿತ್ತು. ಆದರೆ, ಈ ಕಂಪನಿ 1996ರಲ್ಲೇ ತನ್ನ ಕಾರ್ಯಚರಣೆಯನ್ನು ಸ್ಥಗಿತಗೊಳಿಸಿತ್ತು ಮತ್ತು 2001ರಲ್ಲಿ ಅಧಿಕೃತವಾಗಿ ಮುಚ್ಚಲ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಟ್ರೇಡ್‌ಮಾರ್ಕ್ ಹಕ್ಕಿನ ಬಗ್ಗೆ ಕಾನೂನು ಹೋರಾಟ ನಡೆದಿತ್ತು.
ಐಡಿಯಲ್ ಜಾವಾ ಕಂಪನಿಯು ಕಳೆದ 15 ವರ್ಷಗಳಿಗೂ ಹೆಚ್ಚು ಕಾಲ ‘ಯೆಜ್ಡಿ’ ಟ್ರೇಡ್‌ಮಾರ್ಕ್ ಅನ್ನು ಬಳಸಿಲ್ಲ ಅಥವಾ ಅದನ್ನು ನವೀಕರಿಸಿಲ್ಲ ಎಂದು ನ್ಯಾಯಾಲಯ ಗಮನಿಸಿದೆ. ಟ್ರೇಡ್‌ಮಾರ್ಕ್ ರಕ್ಷಣೆಗಾಗಿ ಕಂಪನಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ದೀರ್ಘಕಾಲದವರೆಗೆ ಬ್ರ್ಯಾಂಡ್ ಅನ್ನು ಬಳಸದ ಕಾರಣ ಮತ್ತು ನವೀಕರಿಸದ ಕಾರಣ, ಐಡಿಯಲ್ ಜಾವಾ ಆ ಹೆಸರಿನ ಮೇಲಿನ ಹಕ್ಕನ್ನು ಕಳೆದುಕೊಂಡಿದೆ (Abandoned) ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಕ್ಲಾಸಿಕ್ ಲೆಜೆಂಡ್ಸ್ ಕೈ ಸೇರಿದ ‘ಯೆಜ್ಡಿ’
ಈ ತೀರ್ಪಿನ ಮೂಲಕ, ಕ್ಲಾಸಿಕ್ ಲೆಜೆಂಡ್ಸ್‌ನ ಸಹ-ಸಂಸ್ಥಾಪಕ ಬೊಮನ್ ಆರ್.ಇರಾನಿ ಅವರ ಹೆಸರಿನಲ್ಲಿದ್ದ ಹಿಂದಿನ ನೋಂದಣಿಗಳನ್ನು ನ್ಯಾಯಾಲಯ ಎತ್ತಿಹಿಡಿದಿದೆ. ಇದರೊಂದಿಗೆ, ಕ್ಲಾಸಿಕ್ ಲೆಜೆಂಡ್ಸ್ ಕಂಪನಿಯು ತನ್ನ ಬೈಕ್‌ಗಳಿಗೆ ‘ಯೆಜ್ಡಿ’ ಹೆಸರು ಮತ್ತು ಲೋಗೋಗಳನ್ನು ಬಳಸಲು ಸಂಪೂರ್ಣ ಕಾನೂನುಬದ್ಧ ಹಕ್ಕನ್ನು ಪಡೆದುಕೊಂಡಂತಾಗಿದೆ.






