ಜಾಗತಿಕ ಟೆಕ್ ದೈತ್ಯ ಆಪಲ್ (Apple) ತನ್ನ ಕೃತಕ ಬುದ್ಧಿಮತ್ತೆ (AI) ವಿಭಾಗದಲ್ಲಿ ಮಹತ್ವದ ಬದಲಾವಣೆಯನ್ನು ಘೋಷಿಸಿದ್ದು, ಬೆಂಗಳೂರು ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿ ಹಾಗೂ ಟೆಕ್ ಪರಿಣಿತ ಅಮರ್ ಸುಬ್ರಹ್ಮಣ್ಯ ಅವರನ್ನು ಎಐ ವಿಭಾಗದ ನೂತನ ಉಪಾಧ್ಯಕ್ಷರನ್ನಾಗಿ (Vice President) ನೇಮಿಸಿದೆ. ದೀರ್ಘಕಾಲದಿಂದ ಈ ಹುದ್ದೆಯಲ್ಲಿದ್ದ ಜಾನ್ ಜಿಯಾನಾಂಡ್ರಿಯಾ ಅವರ ಸ್ಥಾನವನ್ನು ಅಮರ್ ಅಲಂಕರಿಸಲಿದ್ದಾರೆ. 2024ರಲ್ಲಿ ‘ಆಪಲ್ ಇಂಟೆಲಿಜೆನ್ಸ್’ ಬಿಡುಗಡೆಯಾದ ನಂತರ ಸಂಸ್ಥೆಯಲ್ಲಿ ನಡೆಯುತ್ತಿರುವ ಅತಿದೊಡ್ಡ ನಾಯಕತ್ವ ಬದಲಾವಣೆ ಇದಾಗಿದೆ.
ಅಮರ್ ಸುಬ್ರಹ್ಮಣ್ಯ ಅವರ ಶೈಕ್ಷಣಿಕ ಬದುಕು ಆರಂಭವಾಗಿದ್ದು ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎಂಬುದು ವಿಶೇಷ. ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ನಂತರ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಪಿಎಚ್‌ಡಿ ಪೂರೈಸಿರುವ ಇವರು, ಮೆಷಿನ್ ಲರ್ನಿಂಗ್ ಮತ್ತು ಎಐ ತಂತ್ರಜ್ಞಾನದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದಾರೆ.
ಆಪಲ್ ಸೇರುವ ಮುನ್ನ ಅಮರ್ ಅವರು ಮೈಕ್ರೋಸಾಫ್ಟ್‌ನಲ್ಲಿ ಎಐ ವಿಭಾಗದ ಕಾರ್ಪೊರೇಟ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅಲ್ಲಿ ಮೈಕ್ರೋಸಾಫ್ಟ್ ‘ಕೋ-ಪೈಲಟ್’ (Copilot) ನಂತಹ ಪ್ರಮುಖ ಎಐ ಮಾಡೆಲ್‌ಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದಕ್ಕೂ ಮುನ್ನ ಬರೋಬ್ಬರಿ 16 ವರ್ಷಗಳ ಕಾಲ ಗೂಗಲ್‌ನಲ್ಲಿ ಕೆಲಸ ಮಾಡಿದ್ದ ಇವರು, ಗೂಗಲ್‌ನ ಪ್ರಸಿದ್ಧ ಎಐ ಅಸಿಸ್ಟೆಂಟ್ ‘ಜೆಮಿನಿ’ (Gemini) ಎಂಜಿನಿಯರಿಂಗ್ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಪ್ರಸ್ತುತ ಗೂಗಲ್, ಮೈಕ್ರೋಸಾಫ್ಟ್ ಮತ್ತು ಸ್ಯಾಮ್‌ಸಂಗ್‌ಗೆ ಹೋಲಿಸಿದರೆ ಎಐ ಸ್ಪರ್ಧೆಯಲ್ಲಿ ಆಪಲ್ ಕೊಂಚ ಹಿಂದಿದೆ ಎಂಬ ಟೀಕೆಗಳಿವೆ. ಈ ಹಿನ್ನೆಲೆಯಲ್ಲಿ, ಎಐ ಕ್ಷೇತ್ರದಲ್ಲಿ ದಿಗ್ಗಜರಾಗಿರುವ ಅಮರ್ ಅವರ ನೇಮಕವು ಆಪಲ್‌ಗೆ ಹೊಸ ಚೈತನ್ಯ ನೀಡುವ ನಿರೀಕ್ಷೆಯಿದೆ. ಇವರು ಐಫೋನ್, ಮ್ಯಾಕ್ ಮತ್ತು ಐಪ್ಯಾಡ್‌ಗಳಲ್ಲಿ ‘ಆಪಲ್ ಇಂಟೆಲಿಜೆನ್ಸ್’ ಅನ್ನು ಮತ್ತಷ್ಟು ಬಲಪಡಿಸುವ ಮತ್ತು ಎಐ ಸುರಕ್ಷತೆಯ ಜವಾಬ್ದಾರಿಯನ್ನು ಹೊತ್ತುಕೊಳ್ಳಲಿದ್ದಾರೆ.






