ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾದ ಎಐ (ಕೃತಕ ಬುದ್ಧಿಮತ್ತೆ) ರಚಿತ ವಿಡಿಯೋವೊಂದು ಇದೀಗ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮತ್ತು ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್ ನಾಯಕಿ ರಾಗಿಣಿ ನಾಯಕ್ ಅವರು ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ಪ್ರಧಾನಿ ಮೋದಿ ಅವರು ವಿದೇಶಿ ನಾಯಕರ ಸಮ್ಮುಖದಲ್ಲಿ ರೆಡ್ ಕಾರ್ಪೆಟ್ ಮೇಲೆ ಟೀ ಮಾರುತ್ತಿರುವ ದೃಶ್ಯವಿದ್ದು, ಇದು ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ.
“ಇದನ್ನು ಯಾರು ಮಾಡಿದ್ದು?” ಎಂಬ ಶೀರ್ಷಿಕೆಯೊಂದಿಗೆ ರಾಗಿಣಿ ನಾಯಕ್ ಅವರು ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಪ್ರಧಾನಿ ಮೋದಿ ನೀಲಿ ಬಣ್ಣದ ಕೋಟ್ ಧರಿಸಿ, ಕೈಯಲ್ಲಿ ಟೀ ಕೆಟಲ್ ಮತ್ತು ಗ್ಲಾಸ್‌ಗಳನ್ನು ಹಿಡಿದುಕೊಂಡು ನಡೆದಾಡುತ್ತಿರುವುದನ್ನು ಕಾಣಬಹುದು. ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಧ್ವಜಗಳು ಮತ್ತು ತ್ರಿವರ್ಣ ಧ್ವಜವಿದ್ದು, ಮೋದಿಯವರ ಧ್ವನಿಯನ್ನು ಅನುಕರಿಸುವ ಆಡಿಯೋದಲ್ಲಿ “ಚಾಯ್ ಬೋಲೋ, ಚಾಯ್ (ಯಾರಿಗಾದರೂ ಚಹಾ ಬೇಕೇ?)” ಎಂದು ಕೇಳುವ ಸಂಭಾಷಣೆಯನ್ನು ಎಡಿಟ್ ಮಾಡಿ ಸೇರಿಸಲಾಗಿದೆ.
ಈ ವಿಡಿಯೋಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಪ್ರತಿಕ್ರಿಯಿಸಿ, “ರೇಣುಕಾ ಚೌಧರಿ ಸಂಸತ್ತನ್ನು ಅವಮಾನಿಸಿದ ನಂತರ, ಇದೀಗ ರಾಗಿಣಿ ನಾಯಕ್ ಪ್ರಧಾನಿಯವರ ‘ಚಾಯ್ ವಾಲಾ’ ಹಿನ್ನೆಲೆಯನ್ನು ಲೇವಡಿ ಮಾಡಿದ್ದಾರೆ. ಅತ್ಯಂತ ಸಾಮಾನ್ಯ ಹಿನ್ನೆಲೆಯಿಂದ ಬಂದ ಒಬಿಸಿ ಸಮುದಾಯದ ನಾಯಕ, ಕಠಿಣ ಪರಿಶ್ರಮದಿಂದ ಪ್ರಧಾನಿಯಾಗಿರುವುದನ್ನು ‘ಎಲೈಟ್’ ಕಾಂಗ್ರೆಸ್‌ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಈಗಾಗಲೇ 150ಕ್ಕೂ ಹೆಚ್ಚು ಬಾರಿ ಪ್ರಧಾನಿಯನ್ನು ನಿಂದಿಸಿರುವ ಕಾಂಗ್ರೆಸ್, ಈಗ ಎಐ ತಂತ್ರಜ್ಞಾನವನ್ನೂ ದುರ್ಬಳಕೆ ಮಾಡಿಕೊಳ್ಳುತ್ತಿದೆ,” ಎಂದು ಕಿಡಿಕಾರಿದ್ದಾರೆ.
ತಾನು ಗುಜರಾತ್‌ನ ರೈಲ್ವೆ ನಿಲ್ದಾಣದಲ್ಲಿ ಟೀ ಮಾರುತ್ತಿದ್ದೆ ಎಂದು ಪ್ರಧಾನಿ ಮೋದಿ ಈ ಹಿಂದೆ ಹೇಳಿಕೊಂಡಿದ್ದರು. ಇದನ್ನೇ ಗುರಿಯಾಗಿಸಿಕೊಂಡು ಕಾಂಗ್ರೆಸ್ ಈ ಅಣಕು ವಿಡಿಯೋ ಹರಿಬಿಟ್ಟಿದೆ. ಇದೇ ವೇಳೆ, ಕಳೆದ ಸೆಪ್ಟೆಂಬರ್‌ನಲ್ಲಿ ಬಿಹಾರ ಕಾಂಗ್ರೆಸ್ ಘಟಕವು ಪ್ರಧಾನಿಯವರ ದಿವಂಗತ ತಾಯಿಯ ಎಐ ವಿಡಿಯೋ ಹಂಚಿಕೊಂಡಿದ್ದನ್ನು ಬಿಜೆಪಿ ಪ್ರಸ್ತಾಪಿಸಿದೆ. ಆ ವಿಡಿಯೋದಲ್ಲಿ ಮೋದಿ ಅವರ ತಾಯಿ ರಾಜಕೀಯದ ಬಗ್ಗೆ ಟೀಕಿಸುವಂತೆ ಚಿತ್ರಿಸಲಾಗಿತ್ತು ಮತ್ತು ನಂತರ ಪಟ್ನಾ ಹೈಕೋರ್ಟ್ ಆದೇಶದ ಮೇರೆಗೆ ಅದನ್ನು ತೆಗೆದುಹಾಕಲಾಗಿತ್ತು ಎಂಬುದು ಗಮನಾರ್ಹ.






