ನವದೆಹಲಿ: ಸ್ಮಾರ್ಟ್‌ಫೋನ್ ಬಳಕೆದಾರರು ಕಡ್ಡಾಯವಾಗಿ ತಮ್ಮ ಫೋನ್‌ಗಳಲ್ಲಿ ‘ಸಂಚಾರ್ ಸಾಥಿ’ (Sanchar Saathi) ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡಿರಲೇಬೇಕು ಎಂಬ ತನ್ನ ಹಿಂದಿನ ಆದೇಶವನ್ನು ಕೇಂದ್ರ ಸರ್ಕಾರ ಬುಧವಾರ ಹಿಂಪಡೆದಿದೆ. ನವೆಂಬರ್ 28 ರಂದು ದೂರಸಂಪರ್ಕ ಇಲಾಖೆ (DoT) ಹೊರಡಿದ್ದ ಆದೇಶದ ಪ್ರಕಾರ, ಹೊಸ ಫೋನ್‌ಗಳಲ್ಲಿ ಕಂಪನಿಗಳೇ ಈ ಆ್ಯಪ್ ಅಳವಡಿಸಬೇಕು ಮತ್ತು ಹಳೆ ಫೋನ್‌ಗಳಿಗೆ ಸಾಫ್ಟ್‌ವೇರ್ ಅಪ್‌ಡೇಟ್ ಮೂಲಕ ನೀಡಬೇಕೆಂದು ಸೂಚಿಸಲಾಗಿತ್ತು. ಆದರೆ, ಇದೀಗ ಆ ನಿಯಮವನ್ನು ರದ್ದುಗೊಳಿಸಲಾಗಿದೆ.
ಜನರು ಸ್ವಯಂಪ್ರೇರಿತರಾಗಿ ಈ ಆ್ಯಪ್ ಅನ್ನು ಹೆಚ್ಚಿನ ಸಂಖ್ಯೆಯಲ್ಲಿ ಡೌನ್‌ಲೋಡ್ ಮಾಡಿಕೊಳ್ಳುತ್ತಿರುವುದೇ ಈ ನಿರ್ಧಾರ ಬದಲಾವಣೆಗೆ ಕಾರಣ ಎಂದು ಸರ್ಕಾರ ತಿಳಿಸಿದೆ. “ಈಗಾಗಲೇ 1.4 ಕೋಟಿಗೂ ಅಧಿಕ ಮಂದಿ ಸಂಚಾರ್ ಸಾಥಿ ಆ್ಯಪ್ ಬಳಸುತ್ತಿದ್ದಾರೆ. ಒಂದೇ ದಿನದಲ್ಲಿ ಸ್ವಯಂಪ್ರೇರಿತ ಡೌನ್‌ಲೋಡ್ ಪ್ರಮಾಣ 10 ಪಟ್ಟು ಹೆಚ್ಚಾಗಿದೆ (ಸುಮಾರು 6 ಲಕ್ಷ). ಜನರ ಈ ಸ್ಪಂದನೆ ಮತ್ತು ಸ್ವೀಕಾರಾರ್ಹತೆ ಹೆಚ್ಚಿರುವುದರಿಂದ, ಇದನ್ನು ಕಡ್ಡಾಯಗೊಳಿಸುವ ಅವಶ್ಯಕತೆ ಇಲ್ಲ,” ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಈ ಆ್ಯಪ್ ಮೂಲಕ ಸರ್ಕಾರ ಜನರ ಮೇಲೆ ಕಣ್ಣಿಡಲಿದೆ ಅಥವಾ ಗೂಢಚರ್ಯೆ (Snooping) ನಡೆಸಲಿದೆ ಎಂದು ವಿರೋಧ ಪಕ್ಷಗಳು ಮತ್ತು ಕೆಲ ಡಿಜಿಟಲ್ ಹಕ್ಕುಗಳ ಹೋರಾಟಗಾರರು ಆರೋಪಿಸಿದ್ದರು. ಈ ಆರೋಪವನ್ನು ತಳ್ಳಿಹಾಕಿರುವ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, “ಇದು ನಾಗರಿಕರಿಗೆ ಸೈಬರ್ ಸುರಕ್ಷತೆ ಒದಗಿಸುವ ಉದ್ದೇಶದಿಂದ ರೂಪಿಸಲಾದ ಆ್ಯಪ್. ಬಳಕೆದಾರರು ತಮಗಿಷ್ಟವಿಲ್ಲದಿದ್ದರೆ ಈ ಆ್ಯಪ್ ಅನ್ನು ಯಾವಾಗ ಬೇಕಾದರೂ ಡಿಲೀಟ್ ಮಾಡಬಹುದು, ಇದು ಕಡ್ಡಾಯವಲ್ಲ,” ಎಂದು ಸ್ಪಷ್ಟನೆ ನೀಡಿದ್ದಾರೆ.
ಸೈಬರ್ ಲೋಕದ ವಂಚಕರಿಂದ ರಕ್ಷಣೆ ಪಡೆಯಲು ಈ ಆ್ಯಪ್ ಸಹಕಾರಿಯಾಗಿದ್ದು, ಪ್ರತಿದಿನ ಸುಮಾರು 2000 ವಂಚನೆ ಪ್ರಕರಣಗಳ ಮಾಹಿತಿ ಇದರ ಮೂಲಕ ಲಭ್ಯವಾಗುತ್ತಿದೆ ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.






