ಭಟ್ಕಳ(ಉತ್ತರಕನ್ನಡ): ಕುಂದಾಪುರದ ತೆಕ್ಕಟ್ಟೆಯಿಂದ ಅಕ್ಕಿ ನುಚ್ಚನ್ನು ತುಂಬಿಕೊಂಡು ಶಿಗ್ಗಾವಿ ಕಡೆಗೆ ಸಾಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಬಾವಿಗೆ ಡಿಕ್ಕಿ ಹೊಡೆದ ಘಟನೆ ಭಟ್ಕಳ ತಾಲೂಕಿನ ವೆಂಕಟಾಪುರ ಸಮೀಪ ಮಂಗಳವಾರ ತಡರಾತ್ರಿ ಸಂಭವಿಸಿದೆ.
ಲಾರಿ ಚಾಲಕನನ್ನು ಧಾರವಾಡ ಜಿಲ್ಲೆಯ ನಿವಾಸಿ ಸಿದ್ದರಾಜು ಘೋರ್ಪಡೆ(34) ಎಂದು ಗುರುತಿಸಲಾಗಿದೆ. ರಾತ್ರಿ ವೇಳೆ ಸಂಚರಿಸುತ್ತಿದ್ದ ಲಾರಿ ಏಕಾಏಕಿ ನಿಯಂತ್ರಣ ಕಳೆದುಕೊಂಡು ಬಾವಿಯ ಕಡೆಗೆ ನುಗ್ಗಿದೆ. ಆದರೆ ಅದೃಷ್ಟವಶಾತ್, ಲಾರಿಯು ಬಾವಿಯ ಕಟ್ಟೆಗೆ ರಭಸವಾಗಿ ಅಪ್ಪಳಿಸಿ ಅಲ್ಲೇ ಸಿಲುಕಿಕೊಂಡಿದೆ. ಲಾರಿ ಸಂಪೂರ್ಣವಾಗಿ ಬಾವಿಯೊಳಗೆ ಬೀಳದೆ ತಡೆಗೋಡೆಗೆ ತಾಗಿ ನಿಂತಿದ್ದರಿಂದ ಸಂಭವಿಸಬಹುದಾಗಿದ್ದ ದೊಡ್ಡ ದುರಂತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಈ ಅವಘಡದಲ್ಲಿ ಚಾಲಕ ಸಿದ್ದರಾಜು ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದಾರೆ.
ಅಪಘಾತದ ನಂತರ ಗಾಯಗೊಂಡ ಚಾಲಕನನ್ನು ತಕ್ಷಣವೇ ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.






