ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು ಸಾರ್ವಕಾಲಿಕ ಕುಸಿತ ಕಂಡಿದೆ. ಮಂಗಳವಾರದಂದು 89.96 ರಷ್ಟಿದ್ದ ರೂಪಾಯಿ ಮೌಲ್ಯವು, ಬುಧವಾರದ ಆರಂಭಿಕ ವಹಿವಾಟಿನಲ್ಲಿ ಮತ್ತೆ 6 ಪೈಸೆಗಳಷ್ಟು ಕುಸಿಯುವ ಮೂಲಕ ಇದೇ ಮೊದಲ ಬಾರಿಗೆ 90ರ ಗಡಿಯನ್ನು ದಾಟಿದೆ. ಆಮದುದಾರರಿಂದ ಡಾಲರ್‌ಗೆ ಹೆಚ್ಚುತ್ತಿರುವ ಬೇಡಿಕೆ ಮತ್ತು ಹೂಡಿಕೆದಾರರು ತಮ್ಮ ಸ್ಥಾನಗಳನ್ನು ಬದಲಾಯಿಸುತ್ತಿರುವುದು ಈ ಹಠಾತ್ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ.
ಈ ಬಗ್ಗೆ ಫಿನ್‌ರೆಕ್ಸ್ ಟ್ರೆಷರಿ ಅಡ್ವೈಸರ್ಸ್‌ನ ಟ್ರೆಷರಿ ಮುಖ್ಯಸ್ಥ ಅನಿಲ್ ಕುಮಾರ್ ಬನ್ಸಾಲಿ ಪ್ರತಿಕ್ರಿಯಿಸಿದ್ದು, “ರಫ್ತುದಾರರಿಗೆ ಸಹಾಯ ಮಾಡುವ ಉದ್ದೇಶದಿಂದ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ರೂಪಾಯಿ ಮೌಲ್ಯವನ್ನು ಕಡಿಮೆ ಮಟ್ಟದಲ್ಲಿಯೇ ಕಾಯ್ದುಕೊಳ್ಳಲು ಬಯಸಿದಂತಿದೆ. ರಾಷ್ಟ್ರೀಕೃತ ಬ್ಯಾಂಕುಗಳು ನಿರಂತರವಾಗಿ ಹೆಚ್ಚಿನ ಮಟ್ಟದಲ್ಲಿ ಡಾಲರ್ ಖರೀದಿಸುತ್ತಿವೆ. ಭಾರತ-ಅಮೆರಿಕ ವ್ಯಾಪಾರ ಮಾತುಕತೆ ಸ್ಥಗಿತಗೊಂಡಿರುವುದು ಮತ್ತು ವಿದೇಶಿ ಬಂಡವಾಳ ಹೊರಹರಿವು (FPI Outflows) ರೂಪಾಯಿ ಮೌಲ್ಯದ ಕುಸಿತಕ್ಕೆ ಕಾರಣವಾಗಿದೆ,” ಎಂದು ವಿಶ್ಲೇಷಿಸಿದ್ದಾರೆ.
ರೂಪಾಯಿ ಮೌಲ್ಯವು ಪ್ರಸ್ತುತ 90ರ ಗಡಿ ದಾಟಿದ್ದು, ಒಂದು ವೇಳೆ ಆರ್‌ಬಿಐ ಮಧ್ಯಪ್ರವೇಶಿಸಿ ಇದನ್ನು ತಡೆಯದಿದ್ದರೆ, ಮುಂಬರುವ ದಿನಗಳಲ್ಲಿ ಇದು 91ರ ಮಟ್ಟವನ್ನೂ ತಲುಪುವ ಸಾಧ್ಯತೆಯಿದೆ ಎಂದು ಬನ್ಸಾಲಿ ಎಚ್ಚರಿಸಿದ್ದಾರೆ. ಇಂದಿನಿಂದ (ಬುಧವಾರ) ಆರ್‌ಬಿಐನ ಹಣಕಾಸು ನೀತಿ ಸಮಿತಿ (MPC) ಸಭೆ ಆರಂಭವಾಗಲಿದ್ದು, ಡಿಸೆಂಬರ್ 5 ರಂದು ಬಡ್ಡಿ ದರದ ನಿರ್ಧಾರ ಪ್ರಕಟವಾಗಲಿದೆ. ಬಡ್ಡಿ ದರ ಕಡಿತಗೊಂಡರೆ ರೂಪಾಯಿ ಮೌಲ್ಯ ಮತ್ತಷ್ಟು ಕುಸಿಯುವ ಭೀತಿ ಇದೆ.
ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 62.43 ಡಾಲರ್‌ಗೆ ಇಳಿಕೆಯಾಗಿದ್ದರೂ ಮತ್ತು ಡಾಲರ್ ಇಂಡೆಕ್ಸ್ 99.22 ಕ್ಕೆ ತಗ್ಗಿ ದುರ್ಬಲವಾಗಿದ್ದರೂ, ಭಾರತೀಯ ರೂಪಾಯಿ ಮಾತ್ರ ಚೇತರಿಸಿಕೊಂಡಿಲ್ಲ. ಇದರ ಪರಿಣಾಮ ಷೇರುಪೇಟೆಯ ಮೇಲೂ ಬೀರಿದ್ದು, ಸೆನ್ಸೆಕ್ಸ್ 165 ಅಂಕಗಳಷ್ಟು ಕುಸಿದು 84,972 ಕ್ಕೆ ತಲುಪಿದ್ದರೆ, ನಿಫ್ಟಿ 77 ಅಂಕಗಳ ಇಳಿಕೆಯೊಂದಿಗೆ 25,954 ಕ್ಕೆ ತಲುಪಿದೆ. ಮಂಗಳವಾರ ಒಂದೇ ದಿನ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬರೋಬ್ಬರಿ 3,642 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿರುವುದು ಮಾರುಕಟ್ಟೆಯ ಆತಂಕವನ್ನು ಹೆಚ್ಚಿಸಿದೆ.






