ಕೋಲ್ಕತ್ತಾ: ಹೆತ್ತವರು ಮಗುವನ್ನು ಕಸದಂತೆ ಬೀದಿಗೆ ಎಸೆದು ಹೋದರೆ, ಬೀದಿನಾಯಿಗಳು ಅದೇ ಮಗುವಿಗೆ ರಕ್ಷಕರಾಗಿ ನಿಂತ ಅಪರೂಪದ ಹಾಗೂ ಮನಕಲಕುವ ಘಟನೆ ಪಶ್ಚಿಮ ಬಂಗಾಳದ ನಬದ್ವೀಪ್‌ನಲ್ಲಿ ನಡೆದಿದೆ. ನಾಡಿಯಾ ಜಿಲ್ಲೆಯ ರೈಲ್ವೆ ಕಾಲೋನಿಯ ಶೌಚಾಲಯದ ಹೊರಗೆ ಅನಾಥವಾಗಿ ಬಿದ್ದಿದ್ದ ನವಜಾತ ಶಿಶುವನ್ನು ಬೀದಿನಾಯಿಗಳ ಗುಂಪು ರಾತ್ರಿಯಿಡೀ ಕಾವಲು ಕಾಯುವ ಮೂಲಕ ಮಾನವೀಯತೆ ಮೆರೆದಿವೆ.
ಸ್ಥಳೀಯರ ಪ್ರಕಾರ, ಮೈಮೇಲೆ ಬಟ್ಟೆಯೂ ಇಲ್ಲದೆ, ಕೊರೆಯುವ ಚಳಿಯಲ್ಲಿ ಮಗುವನ್ನು ನೆಲದ ಮೇಲೆ ಬಿಟ್ಟು ಹೋಗಲಾಗಿತ್ತು. ಆದರೆ, ಅಲ್ಲಿಗೆ ಬಂದ ಬೀದಿನಾಯಿಗಳು ಮಗುವಿನ ಸುತ್ತ ವೃತ್ತಾಕಾರದಲ್ಲಿ ನಿಂತು, ಬೆಳಗಿನ ಜಾವದವರೆಗೂ ಮಗುವಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡಿವೆ. “ಬೆಳಿಗ್ಗೆ ಎದ್ದು ನೋಡಿದಾಗ ಕಂಡ ದೃಶ್ಯ ಮೈ ರೋಮಾಂಚನಗೊಳಿಸಿತು. ನಾಯಿಗಳು ಆಕ್ರಮಣಕಾರಿಯಾಗಿರಲಿಲ್ಲ, ಬದಲಿಗೆ ಮಗುವನ್ನು ಬದುಕಿಸಿಕೊಳ್ಳಲೇಬೇಕೆಂಬ ಹಟದಲ್ಲಿ ಕಾವಲು ಕಾಯುತ್ತಿದ್ದಂತೆ ಕಾಣುತ್ತಿದ್ದವು” ಎಂದು ಪ್ರತ್ಯಕ್ಷದರ್ಶಿ ಶುಕ್ಲಾ ಮೊಂಡಲ್ ತಿಳಿಸಿದ್ದಾರೆ.
ಮುಂಜಾನೆಯ ವೇಳೆ ಮಗುವಿನ ಅಳುವಿನ ಶಬ್ದ ಕೇಳಿ ಹೊರಬಂದ ಸುಭಾಷ್ ಪಾಲ್ ಎಂಬುವವರು, “ಯಾರೋ ಅನಾರೋಗ್ಯ ಪೀಡಿತ ಮಗುವನ್ನು ಕರೆತಂದಿರಬೇಕು ಎಂದುಕೊಂಡೆ. ಆದರೆ ಹತ್ತಿರ ಹೋಗಿ ನೋಡಿದಾಗ ಅಚ್ಚರಿಯಾಗಿತ್ತು. ನಾಯಿಗಳು ಸೈನಿಕರಂತೆ ಮಗುವನ್ನು ಕಾಯುತ್ತಿದ್ದವು” ಎಂದಿದ್ದಾರೆ. ತಕ್ಷಣವೇ ಸ್ಥಳೀಯ ಮಹಿಳೆಯೊಬ್ಬರು ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ. ವೈದ್ಯರ ತಪಾಸಣೆ ಬಳಿಕ ಮಗುವಿಗೆ ಯಾವುದೇ ಗಾಯಗಳಾಗಿಲ್ಲ ಎಂಬುದು ದೃಢಪಟ್ಟಿದೆ.
ವಿಶೇಷವೆಂದರೆ, ಇದೇ ನಾಯಿಗಳನ್ನು ಸಾಮಾನ್ಯವಾಗಿ ಜನ ಕಲ್ಲು ತೂರಿ ಓಡಿಸುತ್ತಿದ್ದರು. ಆದರೆ ಇಂದು ಅದೇ ಪ್ರಾಣಿಗಳು ಹಸುಗೂಸಿನ ಪ್ರಾಣ ಉಳಿಸಿರುವುದನ್ನು ಕಂಡು ಸ್ಥಳೀಯರು ಮೂಕವಿಸ್ಮಿತರಾಗಿದ್ದಾರೆ. ಕೃತಜ್ಞತೆ ಸಲ್ಲಿಸುವ ಸಲುವಾಗಿ ಹಲವರು ನಾಯಿಗಳಿಗೆ ಆಹಾರ ನೀಡುತ್ತಿದ್ದಾರೆ. ಮಗುವನ್ನು ಯಾರು ಬಿಟ್ಟು ಹೋಗಿದ್ದರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಶಿಶು ಕಲ್ಯಾಣ ಇಲಾಖೆ ಮಗುವಿನ ಆರೈಕೆ ಜವಾಬ್ದಾರಿ ವಹಿಸಿಕೊಂಡಿದೆ.






