ವಾರಣಾಸಿ: ಉತ್ತರ ಮತ್ತು ದಕ್ಷಿಣ ಭಾರತದ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಇನ್ಮುಂದೆ ಉತ್ತರ ಪ್ರದೇಶದ ವೃತ್ತಿಪರ ಶಿಕ್ಷಣದಲ್ಲಿ (Vocational Education) ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳನ್ನು ಕಲಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ.
ವಾರಣಾಸಿಯಲ್ಲಿ ನಡೆದ ‘ಕಾಶೀ ತಮಿಳು ಸಂಗಮಂ 4.0’ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ‘ಏಕ್ ಭಾರತ್ ಶ್ರೇಷ್ಠ ಭಾರತ್’ ಪರಿಕಲ್ಪನೆಯಿಂದ ಪ್ರೇರಿತವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು. ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ಅನುಗುಣವಾಗಿ ಕನ್ನಡ, ತಮಿಳು, ಮಲಯಾಳಂ, ತೆಲುಗು, ಮರಾಠಿ ಅಥವಾ ಬೆಂಗಾಲಿ ಭಾಷೆಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಕಲಿಕೆಯ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ಸಿಎಂ ಭರವಸೆ ನೀಡಿದ್ದಾರೆ.
ದಕ್ಷಿಣ ಭಾರತದ ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡುವ ಭಕ್ತರಿಗೂ ಯೋಗಿ ಸಿಹಿ ಸುದ್ದಿ ನೀಡಿದ್ದಾರೆ. ಪ್ರತಿ ವರ್ಷ ಉತ್ತರ ಪ್ರದೇಶದಿಂದ ರಾಮೇಶ್ವರಂ, ಮಧುರೈ ಮತ್ತು ಕನ್ಯಾಕುಮಾರಿಗೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಇವರಿಗಾಗಿ ಪ್ರವಾಸೋದ್ಯಮ ಇಲಾಖೆಯು ವಿಶೇಷ ರಿಯಾಯಿತಿ ದರದ ಪ್ರವಾಸ ಕಾರ್ಯಕ್ರಮಗಳನ್ನು ಆಯೋಜಿಸಲಿದೆ ಎಂದು ಅವರು ತಿಳಿಸಿದರು. ಕಾಶಿ ಮತ್ತು ತಮಿಳು ಸಂಪ್ರದಾಯದ ನಡುವಿನ ಸಂಬಂಧಕ್ಕೆ ಶಿವನೇ ಕೇಂದ್ರ ಬಿಂದುವಾಗಿದ್ದು, ಆದಿ ಶಂಕರಾಚಾರ್ಯರು ಪೀಠಗಳನ್ನು ಸ್ಥಾಪಿಸುವ ಮೂಲಕ ಈ ಸಂಬಂಧವನ್ನು ಬೆಸೆದಿದ್ದಾರೆ ಎಂದು ಸ್ಮರಿಸಿದರು.
ಅಯೋಧ್ಯೆಯ ರಾಮ ಮಂದಿರದ ಸಂಕೀರ್ಣದಲ್ಲಿ ದಕ್ಷಿಣ ಭಾರತದ ಮಹರ್ಷಿ ಅಗಸ್ತ್ಯರ ದೇವಾಲಯ ಮತ್ತು ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಅಷ್ಟೇ ಅಲ್ಲದೆ, ಕರ್ನಾಟಕದ ದಾಸ ಶ್ರೇಷ್ಠರಾದ ಪುರಂದರ ದಾಸರು, ತ್ಯಾಗರಾಜರು ಮತ್ತು ಅರುಣಾಚಲ ಕವಿಗಳ ಪ್ರತಿಮೆಗಳನ್ನು ಅಯೋಧ್ಯೆಯ ಬೃಹಸ್ಪತಿ ಕುಂಡದಲ್ಲಿ ಸ್ಥಾಪಿಸಲಾಗಿದೆ ಎಂದು ಯೋಗಿ ವಿವರಿಸಿದರು. ಕಳೆದ ನಾಲ್ಕು ವರ್ಷಗಳಲ್ಲಿ 26 ಕೋಟಿಗೂ ಹೆಚ್ಚು ಭಕ್ತರು ಕಾಶಿ ವಿಶ್ವನಾಥ ಧಾಮಕ್ಕೆ ಭೇಟಿ ನೀಡಿದ್ದು, ಈ ಪೈಕಿ ತಮಿಳುನಾಡಿನ ಭಕ್ತರೇ ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುದು ವಿಶೇಷ.






