ಬೆಂಗಳೂರು: ಬಾಲಿವುಡ್ ಬಾದ್ಶಾ ಶಾರೂಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಸಿಲಿಕಾನ್ ಸಿಟಿಗೆ ಆಗಮಿಸಿದ್ದ ಆರ್ಯನ್ ಖಾನ್, ಇಲ್ಲಿನ ಪಬ್‌ವೊಂದರಲ್ಲಿ ತೋರಿದ ದುರ್ವರ್ತನೆ ಇದೀಗ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಶ್ರೀಮಂತಿಕೆಯ ಮದ ಮತ್ತು ತಂದೆಯ ಹೆಸರಿನ ಪ್ರಭಾವದಿಂದ ಆರ್ಯನ್ ಖಾನ್ ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ರಾಜ್ಯದ ಪ್ರಭಾವಿ ರಾಜಕೀಯ ನಾಯಕರ ಪುತ್ರರಾದ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಮಗ ಝೈದ್ ಖಾನ್ ಹಾಗೂ ಶಾಸಕ ಹ್ಯಾರೀಸ್ ಅವರ ಪುತ್ರ ಮೊಹಮ್ಮದ್ ನಲಪಾಡ್ ಅವರೊಂದಿಗೆ ಆರ್ಯನ್ ಖಾನ್ ಪಬ್‌ಗೆ ತೆರಳಿದ್ದರು. ಪಬ್‌ನ ಬಾಲ್ಕನಿಯಲ್ಲಿ ನಿಂತಿದ್ದ ವೇಳೆ, ಕೆಳಗೆ ಇದ್ದವರನ್ನು ಉದ್ದೇಶಿಸಿ ಆರ್ಯನ್ ಖಾನ್ ಮಧ್ಯದ ಬೆರಳು (Middle Finger) ತೋರಿಸುವ ಮೂಲಕ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ.
ದುರಹಂಕಾರದ ಪರಮಾವಧಿ ಎಂಬಂತೆ, ಆರ್ಯನ್ ಖಾನ್ ಈ ರೀತಿ ಮಾಡುತ್ತಿದ್ದರೆ, ಪಕ್ಕದಲ್ಲೇ ಇದ್ದ ನಲಪಾಡ್ ಮತ್ತು ಝೈದ್ ಖಾನ್ ಅದನ್ನು ತಡೆಯುವ ಬದಲು ಬಿದ್ದು ಬಿದ್ದು ನಗಾಡುತ್ತಿದ್ದರು ಎಂಬುದು ವೀಡಿಯೋ ದೃಶ್ಯಾವಳಿಗಳಿಂದ ತಿಳಿದುಬಂದಿದೆ ಎನ್ನಲಾಗಿದೆ.
ಈ ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ನೆಟ್ಟಿಗರು ಕಿಡಿಕ್ಯಾರಿದ್ದಾರೆ. “ಇದು ಕೇವಲ ತಮಾಷೆಯಲ್ಲ, ಇದು ಅಧಿಕಾರ ಮತ್ತು ಹಣದ ಮದ” ಎಂದು ಹಲವರು ಟೀಕಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಇಂತಹ ಅಸಭ್ಯ ವರ್ತನೆ ತೋರಿದರೂ ಪೊಲೀಸರು ಯಾಕೆ ಈ ‘ಹೈ-ಪ್ರೊಫೈಲ್’ ಮಕ್ಕಳ ವಿರುದ್ಧ ಕ್ರಮ ಕೈಗೊಂಡಿಲ್ಲ? ಎಂದು ಪ್ರಶ್ನಿಸುತ್ತಿದ್ದಾರೆ. ಸಾಮಾನ್ಯರು ಹೀಗೆ ಮಾಡಿದ್ದರೆ ಸುಮ್ಮನಿರುತ್ತಿದ್ದರೇ? ಎಂದು ಪೊಲೀಸರ ಮೌನದ ಬಗ್ಗೆಯೂ ಜಾಲತಾಣಗಳಲ್ಲಿ ಚರ್ಚೆ ಜೋರಾಗಿದೆ.






