ಬೆಂಗಳೂರು: ರಕ್ಷಣೆ ಮಾಡಬೇಕಾದ ಪೊಲೀಸರೇ ಕಳ್ಳರಂತೆ ವರ್ತಿಸಿದರೆ ಜನಸಾಮಾನ್ಯರು ಯಾರ ಬಳಿ ಹೋಗಬೇಕು? ಇಂತಹದೊಂದು ಪ್ರಶ್ನೆ ಮೂಡುವಂತಹ ಘಟನೆ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ನಡೆದಿದೆ. ವಂಚನೆ ಪ್ರಕರಣದ ಆರೋಪಿಯಿಂದ ಜಪ್ತಿ ಮಾಡಲಾಗಿದ್ದ ಬರೋಬ್ಬರಿ 15 ಲಕ್ಷ ರೂಪಾಯಿ ಹಣವನ್ನು ಖುದ್ದು ಮೀಸಲು ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (RSI) ಮತ್ತು ಪೇದೆಯೋರ್ವರು ಸೇರಿಕೊಂಡು ಗುಳುಂ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ.
ಕಳೆದ ಸೆಪ್ಟೆಂಬರ್ 11 ರಂದು ಕೆಂಗೇರಿ ಠಾಣೆಯಲ್ಲಿ ದಾಖಲಾಗಿದ್ದ ಸೈಬರ್ ಕ್ರೈಂ ವಂಚನೆ ಪ್ರಕರಣವೊಂದು ನಗರ ಪೊಲೀಸ್ ಆಯುಕ್ತರ ಕಚೇರಿಯ ಸೈಬರ್ ಕ್ರೈಂ ಠಾಣೆಗೆ ವರ್ಗಾವಣೆಯಾಗಿತ್ತು. ಈ ವೇಳೆ ತನಿಖೆ ನಡೆಸಿದ ಆರ್‌ಎಸ್‌ಐ ಮತ್ತು ಕಾನ್‌ಸ್ಟೆಬಲ್, ಆರೋಪಿಯ ಕಾರನ್ನು ವಶಕ್ಕೆ ಪಡೆದಿದ್ದರು. ಕಾರಿನಲ್ಲಿದ್ದ 15 ಲಕ್ಷ ರೂಪಾಯಿ ನಗದು ಹಣವನ್ನು ಕಂಡ ಇವರು, ಆ ಹಣವನ್ನು ಜಪ್ತಿ ಪಟ್ಟಿಗೆ ಸೇರಿಸುವ ಬದಲು ಅಥವಾ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವ ಬದಲು, ನೇರವಾಗಿ ತಮ್ಮ ಮನೆಗೆ ಕೊಂಡೊಯ್ದು ಬಚ್ಚಿಟ್ಟಿದ್ದರು.
ಈ ಅಕ್ರಮ ಬೆಳಕಿಗೆ ಬಂದಿದ್ದೇ ರೋಚಕವಾಗಿದೆ. ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾದ ಆರೋಪಿ, ತನ್ನ ಕಾರು ಬಿಡಿಸಿಕೊಳ್ಳಲು ನ್ಯಾಯಾಲಯದಿಂದ ಅನುಮತಿ ಪಡೆದು ಠಾಣೆಗೆ ಬಂದಿದ್ದಾನೆ. ಕಾರನ್ನು ಪಡೆಯುವಾಗ, “ಕಾರಿನಲ್ಲಿದ್ದ ನನ್ನ 15 ಲಕ್ಷ ರೂಪಾಯಿ ಹಣ ಎಲ್ಲಿ?” ಎಂದು ಠಾಣಾಧಿಕಾರಿಯನ್ನು ಪ್ರಶ್ನಿಸಿದ್ದಾನೆ. ಇದರಿಂದ ಕಂಗೆಟ್ಟ ಠಾಣಾಧಿಕಾರಿ ತಕ್ಷಣ ಆಂತರಿಕ ತನಿಖೆ ನಡೆಸಿದಾಗ, ಆರ್‌ಎಸ್‌ಐ ಮತ್ತು ಪೇದೆ ಸೇರಿಕೊಂಡು ಹಣ ಲಪಟಾಯಿಸಿರುವುದು ದೃಢಪಟ್ಟಿದೆ. ಸದ್ಯ ಇಬ್ಬರ ಮನೆಯಲ್ಲಿದ್ದ ಹಣವನ್ನು ವಶಕ್ಕೆ ಪಡೆಯಲಾಗಿದ್ದು, ಇಲಾಖಾ ತನಿಖೆ ಮುಂದುವರಿದಿದೆ.






