ಪಾಣಿಪತ್(ಹರ್ಯಾಣ): ಸೌಂದರ್ಯದ ಮೇಲಿನ ಅತಿಯಾದ ವ್ಯಾಮೋಹ ಮತ್ತು ಹೊಟ್ಟೆಕಿಚ್ಚು ಎಂತಹ ವಿಕೃತಿಯನ್ನು ತರಬಲ್ಲದು ಎಂಬುದಕ್ಕೆ ಹರ್ಯಾಣದಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. “ಚಂದದ ಹುಡುಗಿಯರು” ಕಂಡರೆ ಸಾಕು, ದ್ವೇಷ ಸಾಧಿಸುತ್ತಿದ್ದ 32 ವರ್ಷದ ಮಹಿಳೆಯೊಬ್ಬಳು, ಕಳೆದ ಎರಡು ವರ್ಷಗಳಲ್ಲಿ ಬರೋಬ್ಬರಿ ಮೂವರು ಬಾಲಕಿಯರು ಸೇರಿದಂತೆ ನಾಲ್ವರು ಮುಗ್ಧ ಮಕ್ಕಳನ್ನು ಬಲಿಪಡೆದಿದ್ದಾಳೆ. ತನಗಿಂತ ಈ ಮಕ್ಕಳು ಎಲ್ಲಿ ಸುಂದರವಾಗಿ ಬೆಳೆಯುತ್ತಾರೋ ಎಂಬ ಅಸೂಯೆಯೇ ಈ ಸರಣಿ ಕೊಲೆಗಳಿಗೆ ಕಾರಣ ಎಂಬುದು ತನಿಖೆಯಿಂದ ಬಯಲಾಗಿದೆ.
ಪೂನಂ ಎಂಬಾಕೆಯೇ ಈ ಕ್ರೂರ ಕೃತ್ಯ ಎಸಗಿದ ಆರೋಪಿ. ಈಕೆ ಮಾನಸಿಕ ಅಸ್ವಸ್ಥೆಯಂತೆ ವರ್ತಿಸುತ್ತಿದ್ದು, ಸುಂದರವಾದ ಹೆಣ್ಣುಮಕ್ಕಳನ್ನು ಕಂಡರೆ ಅಸೂಯೆ ಪಡುತ್ತಿದ್ದಳು ಎಂದು ಪಾಣಿಪತ್ ಎಸ್ಪಿ ಭೂಪೇಂದರ್ ಸಿಂಗ್ ತಿಳಿಸಿದ್ದಾರೆ. “ಈ ಮಕ್ಕಳು ದೊಡ್ಡವರಾದ ಮೇಲೆ ನನಗಿಂತ ಹೆಚ್ಚು ಸುಂದರವಾಗಿ ಕಾಣಬಹುದು” ಎಂಬ ಭಯಾನಕ ಆಲೋಚನೆಯಿಂದ ಈಕೆ ಮಕ್ಕಳನ್ನು ನೀರಿನ ಟ್ಯಾಂಕ್ ಅಥವಾ ಟಬ್‌ನಲ್ಲಿ ಮುಳುಗಿಸಿ ಸಾಯಿಸುತ್ತಿದ್ದಳು. ಬಳಿಕ ಇದೊಂದು ಆಕಸ್ಮಿಕ ಸಾವು ಎಂದು ಬಿಂಬಿಸುತ್ತಿದ್ದಳು.
ಎದೆ ನಡುಗಿಸುವ ಸಂಗತಿಯೆಂದರೆ, ಈಕೆ ತನ್ನ ವಿಕೃತಿಗೆ ಸ್ವಂತ ಮಗನನ್ನೂ ಬಲಿ ಕೊಟ್ಟಿದ್ದಾಳೆ. 2023ರಲ್ಲಿ ತನ್ನ ನಾದಿನಿಯ 9 ವರ್ಷದ ಮಗಳನ್ನು ಕೊಲೆ ಮಾಡಿದಾಗ, ಕುಟುಂಬದವರಿಗೆ ಅನುಮಾನ ಬಾರದಿರಲಿ ಎಂದು ತನ್ನದೇ 3 ವರ್ಷದ ಮಗ ಶುಭಮ್‌ನನ್ನೂ ನೀರಿನಲ್ಲಿ ಮುಳುಗಿಸಿ ಕೊಂದಿದ್ದಳು.
ಇತ್ತೀಚೆಗೆ ಮದುವೆ ಸಮಾರಂಭವೊಂದರಲ್ಲಿ 6 ವರ್ಷದ ಬಾಲಕಿಯನ್ನು ಸ್ಟೋರ್‌ರೂಮ್‌ನಲ್ಲಿದ್ದ ನೀರಿನ ಟಬ್‌ನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಳು. ಈ ಪ್ರಕರಣದ ತನಿಖೆ ನಡೆಸಿದಾಗ, ಈ ಸೈಕೋ ಮಹಿಳೆಯ ಕರಾಳ ಮುಖ ಅನಾವರಣಗೊಂಡಿದೆ.






