ಬೆಂಗಳೂರು: ರಾಜ್ಯದ ಅತಿ ದೊಡ್ಡ ಕಾರಾಗೃಹವಾಗಿರುವ ಪರಪ್ಪನ ಅಗ್ರಹಾರ ಕೇಂದ್ರ ಜೈಲು ಮತ್ತೊಮ್ಮೆ ಸುದ್ದಿಯಲ್ಲಿದೆ. ಆದರೆ ಈ ಬಾರಿ ಇಲ್ಲಿ ನಡೆಯುತ್ತಿದ್ದದ್ದು ಸಾಮಾನ್ಯ ಅಕ್ರಮವಲ್ಲ, ಬದಲಾಗಿ ಕುಖ್ಯಾತ ಐಸಿಸ್ ಉಗ್ರನೊಬ್ಬನ ಭರ್ಜರಿ ‘ಹೋಟೆಲ್ ಬಿಸಿನೆಸ್’. ಉಗ್ರ ಚಟುವಟಿಕೆಗಳ ಹಿನ್ನೆಲೆಯಲ್ಲಿ ಜೈಲು ಸೇರಿದ್ದ ಶಕೀಲ್ ಹಮೀದ್ ಮನ್ನಾ ಎಂಬಾತ ಜೈಲಿನೊಳಗೆ ರಾಜಾರೋಷವಾಗಿ ನಡೆಸುತ್ತಿದ್ದ ಅಕ್ರಮ ಮಾಂಸದ ವ್ಯಾಪಾರಕ್ಕೆ ಇದೀಗ ಬ್ರೇಕ್ ಬಿದ್ದಿದೆ.
ಜೈಲಿನ ನಿಯಮಗಳನ್ನು ಗಾಳಿಗೆ ತೂರಿ, ಈ ಉಗ್ರ ಕೈದಿಗಳಿಗೆ ಬಾಯಲ್ಲಿ ನೀರೂರಿಸುವ ಚಿಕನ್, ಮಟನ್ ಮತ್ತು ಶವರ್ಮಾಗಳನ್ನು ಮಾರಾಟ ಮಾಡುತ್ತಿದ್ದ ಎನ್ನುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಹೊರಗಿನಿಂದ ಅಕ್ರಮವಾಗಿ ಮಾಂಸ ಹಾಗೂ ದಿನಸಿಗಳನ್ನು ತರಿಸಿ, ಜೈಲಿನಲ್ಲೇ ಖಾದ್ಯಗಳನ್ನು ತಯಾರಿಸಿ ಅಥವಾ ಹೊರಗಿನಿಂದ ತರಿಸಿ, ಇತರೆ ಕೈದಿಗಳಿಗೆ ಮಾರುಕಟ್ಟೆಗಿಂತ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದ. ಜೈಲು ಊಟ ಇಷ್ಟಪಡದ ಶ್ರೀಮಂತ ಕೈದಿಗಳಿಗೆ ಈತನೇ ಅಲಿಖಿತ ಅನ್ನದಾತನಾಗಿದ್ದ ಮತ್ತು ಇದರಿಂದ ಲಕ್ಷಾಂತರ ರೂಪಾಯಿ ಹಣ ಗಳಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ಅತ್ಯಂತ ಕಳವಳಕಾರಿ ಸಂಗತಿಯೆಂದರೆ, ಈ ಅಕ್ರಮ ದಂಧೆಗೆ ಜೈಲಿನ ಕೆಲವು ಭ್ರಷ್ಟ ಅಧಿಕಾರಿಗಳೇ ಸಾಥ್ ನೀಡುತ್ತಿದ್ದರು ಎನ್ನಲಾಗಿದೆ. ಹೊರಗಿನಿಂದ ಐಟಂಗಳನ್ನು ತಂದುಕೊಡಲು ಮತ್ತು ಈ ದಂಧೆಯನ್ನು ನಿರ್ಭೀತಿಯಿಂದ ನಡೆಸಲು, ಬಂದ ಲಾಭದಲ್ಲಿ ಜೈಲಾಧಿಕಾರಿಗಳಿಗೂ ಈ ಉಗ್ರ ಪಾಲನ್ನು (ಕಮಿಷನ್) ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಆದರೆ, ಈ ಅಕ್ರಮಗಳ ಸರಮಾಲೆಗೆ ಜೈಲು ಅಧೀಕ್ಷಕ (SP) ಅಂಶುಕುಮಾರ್ ಅವರು ಇದೀಗ ಕಡಿವಾಣ ಹಾಕಿದ್ದಾರೆ. ಅಧಿಕಾರ ಸ್ವೀಕರಿಸಿದ ಕೂಡಲೇ ಕಠಿಣ ಕ್ರಮ ಕೈಗೊಂಡಿರುವ ಅವರು, ಉಗ್ರನ ‘ಶವರ್ಮ ಬಿಸಿನೆಸ್’ ಅನ್ನು ಸಂಪೂರ್ಣವಾಗಿ ಬಂದ್ ಮಾಡಿಸಿ, ಜೈಲಿನಲ್ಲಿ ಶಿಸ್ತು ಕಾಪಾಡಲು ಮುಂದಾಗಿದ್ದಾರೆ.






