ನವದೆಹಲಿ: ಅಮೆರಿಕಾದ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಪಾತಾಳಕ್ಕೆ ಕುಸಿದಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ 90ರ ಗಡಿ ದಾಟಿದೆ. ರೂಪಾಯಿಯ ಈ ದಯನೀಯ ಸ್ಥಿತಿಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 2014ಕ್ಕೂ ಮೊದಲು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ರೂಪಾಯಿ ಮೌಲ್ಯ ಕುಸಿತದ ಬಗ್ಗೆ ಮೋದಿ ಆಡಿದ್ದ ಮಾತುಗಳನ್ನೇ ಮುಂದಿಟ್ಟುಕೊಂಡು ಖರ್ಗೆ ತಿರುಗೇಟು ನೀಡಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿರುವ ಖರ್ಗೆ, “ಇಂದು ರೂಪಾಯಿ ಮೌಲ್ಯ 90ರ ಗಡಿ ದಾಟಿದೆ. ಸರ್ಕಾರ ಎಷ್ಟೇ ಅಭಿವೃದ್ಧಿಯ ಡಂಗೂರ ಸಾರಿದರೂ, ಕುಸಿಯುತ್ತಿರುವ ರೂಪಾಯಿ ಮೌಲ್ಯವು ದೇಶದ ನೈಜ ಆರ್ಥಿಕ ಪರಿಸ್ಥಿತಿ ಏನಿದೆ ಎಂಬುದನ್ನು ಜಗಜ್ಜಾಹೀರು ಮಾಡುತ್ತಿದೆ. ಒಂದು ವೇಳೆ ಮೋದಿ ಸರ್ಕಾರದ ನೀತಿಗಳು ಸರಿಯಾಗಿದ್ದರೆ ರೂಪಾಯಿ ಹೀಗೆ ಪತನವಾಗುತ್ತಿರಲಿಲ್ಲ,” ಎಂದು ಕಿಡಿಕಾರಿದ್ದಾರೆ.
“2014ಕ್ಕೂ ಮುನ್ನ ಮೋದಿಜೀ ಅವರು ಅಂದಿನ ಕೇಂದ್ರ ಸರ್ಕಾರವನ್ನುದ್ದೇಶಿಸಿ, ‘ಭಾರತದ ರೂಪಾಯಿ ಮೌಲ್ಯ ಏಕೆ ಹೀಗೆ ಕರಗುತ್ತಿದೆ (ಪತ್ಲಾ)? ಇದಕ್ಕೆ ನೀವು ಉತ್ತರಿಸಲೇಬೇಕು, ದೇಶ ನಿಮ್ಮಿಂದ ಉತ್ತರ ಬಯಸುತ್ತಿದೆ’ ಎಂದು ಪ್ರಶ್ನಿಸಿದ್ದರು. ಇಂದು ಅದೇ ಪ್ರಶ್ನೆಯನ್ನು ನಾವು ಮೋದಿಜೀ ಅವರಿಗೆ ಕೇಳುತ್ತಿದ್ದೇವೆ. ಅವರು ದೇಶಕ್ಕೆ ಉತ್ತರಿಸಲೇಬೇಕು” ಎಂದು ಖರ್ಗೆ ಸವಾಲು ಹಾಕಿದ್ದಾರೆ.
ನಾವು ಅಭಿವೃದ್ಧಿ ಹೊಂದುತ್ತಿದ್ದೇವೆ ಎಂದು ಸರ್ಕಾರ ಹೇಳಿಕೊಳ್ಳುತ್ತದೆ, ಆದರೆ ಕರೆನ್ಸಿ ಮೌಲ್ಯ ಕುಸಿದಾಗ ಆರ್ಥಿಕತೆಯ ಅಸಲಿ ಸತ್ಯ ಹೊರಬರುತ್ತದೆ ಎಂದು ಸಂಸತ್ ಆವರಣದಲ್ಲೂ ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: Market Shock | ಇದೇ ಮೊದಲ ಬಾರಿಗೆ ಡಾಲರ್ ಎದುರು 90ರ ಗಡಿ ದಾಟಿದ ರೂಪಾಯಿ ಮೌಲ್ಯ!
ಗುರುವಾರದ ಆರಂಭಿಕ ವಹಿವಾಟಿನಲ್ಲೇ ರೂಪಾಯಿ ಮೌಲ್ಯವು 28 ಪೈಸೆಗಳಷ್ಟು ಕುಸಿದು, ಡಾಲರ್ ಎದುರು 90.43 ರೂ.ಗಳ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ತಲುಪಿದೆ. ಆಮದುದಾರರಿಂದ ಡಾಲರ್‌ಗೆ ಹೆಚ್ಚಿದ ಬೇಡಿಕೆ ಮತ್ತು ಆರ್‌ಬಿಐನ ಹಣಕಾಸು ನೀತಿ ಪ್ರಕಟಣೆಗೂ ಮುನ್ನ ಮಾರುಕಟ್ಟೆಯಲ್ಲಿ ಉಂಟಾದ ಒತ್ತಡವೇ ಈ ಕುಸಿತಕ್ಕೆ ಕಾರಣ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.






