ಬೆಂಗಳೂರು: ಸಪ್ತ ಸಾಗರದಾಚೆಗೂ ಕನ್ನಡದ ಕಂಪು ಹಬ್ಬಿದೆ ಎನ್ನುವುದಕ್ಕೆ ಇಲ್ಲೊಂದು ತಾಜಾ ಸಾಕ್ಷಿ ಸಿಕ್ಕಿದೆ. ಉಗಾಂಡದ ಪ್ರಖ್ಯಾತ ‘ಗೆಟ್ಟೋ ಕಿಡ್ಸ್’ (Ghetto Kids) ಕನ್ನಡದ ಟಪಾಂಗ್ ಬೀಟ್‌ಗಳಿಗೆ ಭರ್ಜರಿಯಾಗಿ ಹೆಜ್ಜೆ ಹಾಕುವ ಮೂಲಕ ಇಂಟರ್ನೆಟ್‌ನಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. ಬ್ರಿಟನ್ಸ್ ಗಾಟ್ ಟ್ಯಾಲೆಂಟ್ (Britain’s Got Talent) ಸೇರಿದಂತೆ ಜಾಗತಿಕ ವೇದಿಕೆಗಳಲ್ಲಿ ಮಿಂಚಿದ್ದ ಈ ಪ್ರತಿಭೆಗಳು, ಇದೀಗ ಕನ್ನಡದ ‘AFRO ಟಪಾಂಗ್’ ಹಾಡಿಗೆ ತಮ್ಮದೇ ಆದ ಹೈ-ಎನರ್ಜಿ ಸ್ಟೆಪ್ಸ್ ಹಾಕುವ ಮೂಲಕ ‘ಆಫ್ರೋ ಟಪಾಂಗ್’ ಅಲೆಯನ್ನು ಸೃಷ್ಟಿಸಿದ್ದಾರೆ.
ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ’45’ ಚಿತ್ರದ ಈ ಹಾಡಿನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಅವರ ಪವರ್‌ಪ್ಯಾಕ್ ಪರ್ಫಾರ್ಮೆನ್ಸ್ ಇದ್ದು, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ನವೆಂಬರ್ 1ರಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾದ ಈ ಹಾಡು ಈಗಾಗಲೇ 16.06 ಮಿಲಿಯನ್‌ಗೂ ಅಧಿಕ ವೀಕ್ಷಣೆ ಹಾಗೂ 1.5 ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದು ದಾಖಲೆ ಬರೆದಿದೆ. ಇದೀಗ ಉಗಾಂಡದ ಮಕ್ಕಳು ಈ ಹಾಡಿಗೆ ಕುಣಿದಿರುವುದು ಹಾಡಿನ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ವಿಶೇಷವೆಂದರೆ, ಹಾಲಿವುಡ್‌ನ ಪ್ರಸಿದ್ಧ ವಿಎಫ್‌ಎಕ್ಸ್ (VFX) ಕಂಪನಿಯಾದ ಕೆನಡಾದ ‘MARZ’ ಸಂಸ್ಥೆ ಈ ಹಾಡಿನ ದೃಶ್ಯ ವೈಭವಕ್ಕೆ ಕೆಲಸ ಮಾಡಿದೆ. ಹಾಡಿನ ಲಯಬದ್ಧತೆ ಮತ್ತು ಮೇಕಿಂಗ್ ಗುಣಮಟ್ಟವು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್, ಫ್ಲ್ಯಾಶ್‌ಮಾಬ್‌ಗಳ ಮೂಲಕ ಟಪಾಂಗ್ ಹಾಡು ಟ್ರೆಂಡ್ ಹುಟ್ಟುಹಾಕಿದ್ದು, ಡಿಸೆಂಬರ್ 25ರಂದು ಕ್ರಿಸ್‌ಮಸ್ ಹಬ್ಬದಂದು ಬಿಡುಗಡೆಯಾಗಲಿರುವ ’45’ ಚಿತ್ರಕ್ಕೆ ದೊಡ್ಡ ಮಟ್ಟದ ಪ್ರಚಾರ ಸಿಕ್ಕಂತಾಗಿದೆ.
ನಿರ್ಮಾಪಕ ರಮೇಶ್ ರೆಡ್ಡಿ ಅವರ ಈ ಅದ್ದೂರಿ ಚಿತ್ರದ ಹಾಡು ಕೇವಲ ಪ್ರಚಾರಕ್ಕಾಗಿ ಬಿಡುಗಡೆಯಾಗಿದ್ದರೂ, ಸಿಗುತ್ತಿರುವ ಅಗಾಧ ಪ್ರತಿಕ್ರಿಯೆ ಚಿತ್ರತಂಡದ ವಿಶ್ವಾಸವನ್ನು ಹೆಚ್ಚಿಸಿದೆ. ಉಗಾಂಡದ ಗೆಟ್ಟೋ ಕಿಡ್ಸ್ ನೃತ್ಯದ ಮೂಲಕ ಈ ಹಾಡು ಗ್ಲೋಬಲ್ ಟಚ್ ಪಡೆದುಕೊಂಡಿದ್ದು, ಮುಂಬರುವ ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ’45’ ಸಿನಿಮಾ ಭರ್ಜರಿ ಓಪನಿಂಗ್ ಪಡೆಯುವ ಮುನ್ಸೂಚನೆ ನೀಡಿದೆ.






