ಜೋಯಿಡಾ(ಉತ್ತರ ಕನ್ನಡ): ಕರ್ನಾಟಕ-ಗೋವಾ ಗಡಿಯ ಅನಮೋಡ್ ಬಳಿ ಗುರುವಾರ ರಾತ್ರಿ ಸಿನಿಮೀಯ ಶೈಲಿಯಲ್ಲಿ ಅಕ್ರಮ ಗೋಮಾಂಸ ಸಾಗಾಟಗಾರರನ್ನು ಪೊಲೀಸರು ಬೆನ್ನಟ್ಟಿದ ಘಟನೆ ನಡೆದಿದೆ. ಪೊಲೀಸರ ಕಣ್ತಪ್ಪಿಸಲು ಅತಿವೇಗವಾಗಿ ಕಾರು ಚಲಾಯಿಸಿ, ಗಡಿ ದಾಟಿ, ಮತ್ತೆ ವಾಪಸ್ ಬಂದು ಅಂತಿಮವಾಗಿ ವಾಹನವನ್ನು ನಡುರಸ್ತೆಯಲ್ಲೇ ಬಿಟ್ಟು ಚಾಲಕ ಕಾಡಿನೊಳಗೆ ಪರಾರಿಯಾಗಿದ್ದಾನೆ.
ಅನಮೋಡ್ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ನಡೆಸುತ್ತಿದ್ದ ರಾಮನಗರ ಠಾಣೆ ಪೊಲೀಸರು GA08 A5193 ನೋಂದಣಿ ಸಂಖ್ಯೆಯ ಇನ್ನೋವಾ ಕಾರನ್ನು ನಿಲ್ಲಿಸಲು ಸೂಚಿಸಿದ್ದಾರೆ. ಆದರೆ ಚಾಲಕ ಪೊಲೀಸರ ಸೂಚನೆಯನ್ನು ಲೆಕ್ಕಿಸದೆ ಗೋವಾ ಕಡೆಗೆ ವೇಗವಾಗಿ ನುಗ್ಗಿದ್ದಾನೆ. ತಕ್ಷಣ ಎಚ್ಚೆತ್ತ ರಾಜ್ಯ ಪೊಲೀಸರು ಗೋವಾ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಗೋವಾ ವ್ಯಾಪ್ತಿಯ ದಾರಬಾಂದೋಡಾದಲ್ಲಿ ಅಲ್ಲಿನ ಪೊಲೀಸರು ವಾಹನ ತಡೆಹಿಡಿಯಲು ಮುಂದಾದಾಗ, ಚಾಲಕ ಚಾಣಾಕ್ಷತನದಿಂದ ಕಾರನ್ನು ಯು-ಟರ್ನ್ ಮಾಡಿ ಮತ್ತೆ ಕರ್ನಾಟಕ ಗಡಿಯತ್ತ ಆಗಮಿಸಿದ್ದಾನೆ.
1 ಟನ್‌ಗೂ ಹೆಚ್ಚು ಗೋಮಾಂಸ ಪತ್ತೆ ಮತ್ತೆ ಅನಮೋಡ್ ಬಳಿ ಬಂದಾಗ ರಾಮನಗರ ಪೊಲೀಸರು ಕಾರನ್ನು ಸುತ್ತುವರೆದಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದಾಗ ಚಾಲಕ ಕಾರನ್ನು ಅಲ್ಲಿಯೇ ಬಿಟ್ಟು ದಟ್ಟಾರಣ್ಯದೊಳಗೆ ಓಡಿ ಕಣ್ಮರೆಯಾಗಿದ್ದಾನೆ. ಪೊಲೀಸರು ಕಾರನ್ನು ಪರಿಶೀಲಿಸಿದಾಗ, ಅದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಬರೋಬ್ಬರಿ 1 ಟನ್‌ಗೂ ಅಧಿಕ, ಲಕ್ಷಾಂತರ ರೂಪಾಯಿ ಮೌಲ್ಯದ ಗೋಮಾಂಸ ಪತ್ತೆಯಾಗಿದೆ.
ಸದ್ಯ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಕ್ರಮ ಗೋಮಾಂಸ ಸಾಗಾಟದ ಹಿಂದಿರುವ ಮಾಫಿಯಾ ಬಗ್ಗೆ ಶಂಕೆ ವ್ಯಕ್ತವಾಗಿದೆ. ಕತ್ತಲಲ್ಲಿ ಕಾಡು ಪಾಲಾಗಿರುವ ಚಾಲಕ ಹಾಗೂ ವಾಹನ ಮಾಲೀಕರಿಗಾಗಿ ಪೊಲೀಸರು ಬಲೆ ಬೀಸಿದ್ದು, ಗಡಿಭಾಗದಲ್ಲಿ ಹದ್ದಿನ ಕಣ್ಣಿಟ್ಟಿದ್ದಾರೆ.






