ಪುಣೆ: ವಿದೇಶದಲ್ಲಿ ಓದಿ, ಕೈತುಂಬಾ ಸಂಬಳ ಬರುವ ಐಷಾರಾಮಿ ಕೆಲಸ ಗಿಟ್ಟಿಸಿಕೊಳ್ಳಬೇಕೆಂಬುದು ಕೋಟ್ಯಂತರ ಭಾರತೀಯ ಯುವಕರ ಕನಸು. ಆದರೆ, ಇಲ್ಲೊಬ್ಬ ಯುವಕ ಜರ್ಮನಿಯಲ್ಲಿದ್ದ ಪ್ರತಿಷ್ಠಿತ ಟೆಕ್ ಉದ್ಯೋಗಕ್ಕೆ (High-paying tech job) ರಾಜೀನಾಮೆ ನೀಡಿ, ದೋಸೆ ಹಿಟ್ಟು ಮತ್ತು ಕಾವಲಿಯೊಂದಿಗೆ ಹೊಸ ಸಾಹಸಕ್ಕೆ ಇಳಿದಿದ್ದಾರೆ. ವಿದೇಶದಲ್ಲಿ ದೋಸೆ ಕಂಪನ್ನು ಹರಡಿ ಯಶಸ್ವಿಯಾಗಿರುವ ‘ದೋಸಮ್ಮ’ (Dosamaa) ರೆಸ್ಟೋರೆಂಟ್‌ನ ಸಹ-ಸ್ಥಾಪಕ ಮೋಹನ್ ಅವರ ಈ ಸಾಹಸಗಾಥೆ ಈಗ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ.
ವಿದ್ಯಾರ್ಥಿವೇತನ ಪಡೆದು ಪ್ಯಾರಿಸ್‌ನಲ್ಲಿ ಉನ್ನತ ಶಿಕ್ಷಣ ಮುಗಿಸಿದ್ದ ಮೋಹನ್, ಜರ್ಮನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದರು. ಆದರೆ, 2023ರಲ್ಲಿ ಕೆಲಸಕ್ಕೆ ವಿದಾಯ ಹೇಳಿದ ಅವರು, ತಮ್ಮ ಸ್ನೇಹಿತರೊಂದಿಗೆ ಸೇರಿ ಪ್ಯಾರಿಸ್‌ನಲ್ಲಿ ದೋಸೆ ವ್ಯಾಪಾರ ಆರಂಭಿಸಿದರು.
“ಕೇಳಲು ಕೆಲಸ ಬಿಟ್ಟ ನಿರ್ಧಾರ ತುಂಬಾ ಕೂಲ್ ಅನ್ನಿಸಬಹುದು. ಆದರೆ ವಾಸ್ತವದಲ್ಲಿ ಇದು ಹೂವಿನ ಹಾದಿಯಾಗಿರಲಿಲ್ಲ. ನಿದ್ದೆಯಿಲ್ಲದ ರಾತ್ರಿಗಳು, ನಿರ್ವಹಣೆಯ ತಲೆನೋವು ಮತ್ತು ದೈಹಿಕ ಶ್ರಮದ ನಂತರ ಇಂದು ಪ್ಯಾರಿಸ್ ಮತ್ತು ಲಂಡನ್‌ನಲ್ಲಿ ನಮ್ಮ ದೋಸೆ ಬ್ರ್ಯಾಂಡ್ ಬೆಳೆದಿದೆ” ಎಂದು ಮೋಹನ್ ತಮ್ಮ ಇನ್ಸ್ಟಾಗ್ರಾಮ್ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.
ಜಗತ್ತಿಗೆ ಆರೋಗ್ಯಕರ ಹಾಗೂ ಗ್ಲುಟನ್-ಫ್ರೀ (Gluten-free) ದೋಸೆಗಳನ್ನು ಉಣಬಡಿಸುವುದೇ ತಮ್ಮ ಮಿಷನ್ ಎನ್ನುವ ಮೋಹನ್, ಇದೀಗ ವಿದೇಶದ ನಂತರ ಭಾರತಕ್ಕೂ ಕಾಲಿಟ್ಟಿದ್ದಾರೆ. ಮಹಾರಾಷ್ಟ್ರದ ಪುಣೆಯ ಎಫ್‌ಸಿ ರಸ್ತೆಯಲ್ಲಿ (FC Road) ‘ದೋಸಮ್ಮ’ದ ಹೊಸ ಶಾಖೆಯನ್ನು ತೆರೆಯಲಾಗಿದೆ.
ಮೋಹನ್ ಅವರ ಈ ಧೈರ್ಯ ಮತ್ತು ಯಶಸ್ಸಿಗೆ ನೆಟ್ಟಿಗರು ಫಿದಾ ಆಗಿದ್ದು, “ಭಾರತದ ಆರೋಗ್ಯಕರ ಆಹಾರವನ್ನು ಜಗತ್ತಿಗೆ ಪರಿಚಯಿಸುತ್ತಿರುವ ನಿಮ್ಮ ಬಗ್ಗೆ ಹೆಮ್ಮೆಯಿದೆ” ಎಂದು ಸೋಶಿಯಲ್ ಮೀಡಿಯಾದಲ್ಲಿ ಪ್ರಶಂಸೆಯ ಸುರಿಮಳೆಗೈಯುತ್ತಿದ್ದಾರೆ.






