Home State Politics National More
STATE NEWS

Sardha Panchashatamanotsava | “ರಾಮನಾಮ ಜಪವೇ ವೇದಮಂತ್ರಕ್ಕೆ ಸಮಾನ”: ಶಿವಾನಂದ ಸರಸ್ವತಿ ಸ್ವಾಮೀಜಿ

Partagali math sardha panchashatamanotsava shivananda saraswati swamiji rama nama speech
Posted By: Sagaradventure
Updated on: Dec 5, 2025 | 3:32 PM

ಗೋವಾ: “ಕಲಿಯುಗದಲ್ಲಿ ಭಗವಂತನನ್ನು ಒಲಿಸಿಕೊಳ್ಳಲು ಇರುವ ಅತ್ಯಂತ ಸರಳ ಮತ್ತು ಸಹಜ ಮಾರ್ಗವೆಂದರೆ ಅದು ಶ್ರೀರಾಮ ನಾಮ ಸ್ಮರಣೆ. ಇದು ನೇರವಾಗಿ ವೇದ ಮಂತ್ರಕ್ಕೆ ಸಮಾನವಾಗಿದೆ,” ಎಂದು ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠಾಧೀಶರಾದ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮೀಜಿ ಅವರು ಭಕ್ತರಿಗೆ ಕರೆ ನೀಡಿದರು.

ಇಲ್ಲಿನ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಸಭಾ ಮಂಟಪದಲ್ಲಿ ನಡೆದ ಮಠದ ‘ಸಾರ್ಧ ಪಂಚಶತಮಾನೋತ್ಸವ’ದ 550ನೇ ವರ್ಷಾಚರಣೆಯ ಧರ್ಮ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. “ಮುಂದಿನ ಜನ್ಮದಲ್ಲಿ ಮಾನವ ಜೀವನ ಸಿಗುತ್ತದೆಯೋ ಇಲ್ಲವೋ ಎಂಬುದು ಅನಿಶ್ಚಿತ. ಹೀಗಾಗಿ ಸಿಕ್ಕಿರುವ ಈ ಜೀವನದಲ್ಲಿ ಶ್ರೀರಾಮ ನಾಮ ಜಪವನ್ನು ಇಲ್ಲಿಗೆ ನಿಲ್ಲಿಸದೆ ನಿರಂತರವಾಗಿ ಮುಂದುವರಿಸಬೇಕು” ಎಂದು ಅವರು ಸಲಹೆ ನೀಡಿದರು.

ಆಧ್ಯಾತ್ಮಿಕ ಜ್ಞಾನವೇ ಶ್ರೇಷ್ಠ

ಲೌಕಿಕ ಜ್ಞಾನ ಯಾರಿಗಾದರೂ ಸಿಗಬಹುದು, ಆದರೆ ಶರೀರ ಮತ್ತು ಜೀವವನ್ನು ನೀಡಿದ ಪರಮಾತ್ಮನನ್ನು ಅರಿಯುವ ಆಧ್ಯಾತ್ಮಿಕ ಜ್ಞಾನಕ್ಕೆ ಗುರುಗಳ ಅಗತ್ಯವಿದೆ. ಗೋಕರ್ಣ ಮಠಕ್ಕೆ ಅಂತಹ ಸಮರ್ಥ ಗುರುಪರಂಪರೆ ಲಭಿಸಿದೆ. 2021 ರಿಂದ 2025ರ ಅವಧಿಯಲ್ಲಿ ಮಠದಲ್ಲಿ ಆಗಿರುವ ಧಾರ್ಮಿಕ ಮತ್ತು ವ್ಯವಸ್ಥಿತ ಬದಲಾವಣೆಗಳು, ಪರಂಪರೆಯ ಸೊಬಗು ಕಂಡು ಸಂತೋಷವಾಗಿದೆ ಎಂದು ಕೈವಲ್ಯ ಶ್ರೀಗಳು ಶ್ಲಾಘಿಸಿದರು. ಇದೇ ವೇಳೆ ಬ್ರಾಹ್ಮಣರು ಪಾರಂಪರಿಕ ಸಂಸ್ಕೃತಿಯನ್ನು ಪಾಲಿಸಬೇಕು, ಮಹಾದೇವನಿಂದ ಜ್ಞಾನ ಪಡೆದರೆ ವಿಷ್ಣುವಿನಿಂದ ಮೋಕ್ಷ ಸಿಗುತ್ತದೆ ಎಂದು ತಿಳಿಸಿದರು.

ಮಠಗಳ ತ್ರಿವೇಣಿ ಸಂಗಮ

ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಆಶೀರ್ವಚನ ನೀಡಿ, “ಕೈವಲ್ಯ ಮತ್ತು ಪರ್ತಗಾಳಿ ಮಠಗಳ ನಡುವೆ ಅವಿನಾಭಾವ ಸಂಬಂಧವಿದೆ. ಒಂದೇ ಸಂವತ್ಸರದಲ್ಲಿ ಮೂರು ಬೇರೆ ಬೇರೆ ಸ್ಥಳಗಳಲ್ಲಿ ಉಭಯ ಶ್ರೀಗಳ ಸಮಾಗಮವಾಗಿರುವುದು ‘ತ್ರಿವೇಣಿ ಸಂಗಮ’ದಂತಾಗಿದೆ,” ಎಂದು ಹರ್ಷ ವ್ಯಕ್ತಪಡಿಸಿದರು. ನಮ್ಮ ಶ್ರೀರಾಮ ನಾಮ ಸಂಕಲ್ಪಕ್ಕೆ ಕೈವಲ್ಯ ಶ್ರೀಗಳು ತಮ್ಮ ಶಿಷ್ಯರಿಗೂ ಜಪ ಮಾಡಲು ಸೂಚಿಸಿ ಬೆಂಬಲ ನೀಡಿದ್ದನ್ನು ಸ್ಮರಿಸಿದರು.

ಗೋವಾಕ್ಕೆ ಹೆಮ್ಮೆ

ಕಾರ್ಯಕ್ರಮದಲ್ಲಿ ಮಾತನಾಡಿದ ಗೋವಾ ಲೋಕೋಪಯೋಗಿ ಸಚಿವ ದಿಗಂಬರ ಕಾಮತ, “ಪರ್ತಗಾಳಿ ಮಠವು ಗೋವಾದಲ್ಲಿರುವುದು ನಮ್ಮ ಸರ್ಕಾರ ಮತ್ತು ಜನತೆಗೆ ಹೆಮ್ಮೆಯ ವಿಷಯ. ಯುವಜನರನ್ನು ಧರ್ಮದ ಕಡೆಗೆ ಸೆಳೆಯುವ ಶಕ್ತಿ ವಿದ್ಯಾಧೀಶ ಶ್ರೀಗಳಲ್ಲಿದೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಭೆಯಲ್ಲಿ ಮಠ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಡೆಂಪೋ, ಉಪಾಧ್ಯಕ್ಷ ಶಿವಾನಂದ ಸಾಲಗಾಂವಕರ್, ಆರ್.ಆರ್.ಕಾಮತ್, ಹಿರಿಯ ಐಪಿಎಸ್ ಅಧಿಕಾರಿ ಶ್ರೀನಿವಾಸ್ ಗೋಕರ್ಣ, ರಾಜೇಂದ್ರ ದೇಶಪಾಂಡೆ, ಮುಕುಂದ ಕಾಮತ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ರಾಮಕೃಷ್ಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.

Shorts Shorts