ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಹತ್ವದ ದ್ವಿಪಕ್ಷೀಯ ಮಾತುಕತೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್ ಯುದ್ಧದ ಕುರಿತು ಭಾರತದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಶುಕ್ರವಾರ (ಡಿ.5) ದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ನಡೆದ ಭೇಟಿ ವೇಳೆ ಮಾತನಾಡಿದ ಅವರು, “ನಾವು ಯುದ್ಧದ ವಿಷಯದಲ್ಲಿ ತಟಸ್ಥರಲ್ಲ (Neutral), ಬದಲಿಗೆ ನಾವು ಶಾಂತಿಯ ಪರವಾಗಿದ್ದೇವೆ” ಎಂದು ಪುಟಿನ್ ಅವರ ಸಮ್ಮುಖದಲ್ಲೇ ಖಡಕ್ ಸಂದೇಶ ರವಾನಿಸಿದ್ದಾರೆ.
ಶಾಂತಿಗಾಗಿ ಹೆಗಲಿಗೆ ಹೆಗಲು ಕೊಡುವೆವು
ಮಾತುಕತೆಯ ಆರಂಭದಲ್ಲಿಯೇ ಶಾಂತಿಯ ಮಂತ್ರ ಜಪಿಸಿದ ಪ್ರಧಾನಿ ಮೋದಿ, “ನಾನು ವಿಶ್ವದ ನಾಯಕರೊಂದಿಗೆ ಚರ್ಚಿಸುವಾಗಲೆಲ್ಲಾ, ಭಾರತ ತಟಸ್ಥವಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದೇನೆ. ಭಾರತಕ್ಕೆ ಒಂದು ಪಕ್ಷವಿದೆ, ಅದುವೇ ‘ಶಾಂತಿ’. ಶಾಂತಿಗಾಗಿ ನಡೆಯುವ ಎಲ್ಲಾ ಪ್ರಯತ್ನಗಳಿಗೆ ನಾವು ಬೆಂಬಲ ನೀಡುತ್ತೇವೆ ಮತ್ತು ಅಂತಹ ಪ್ರಯತ್ನಗಳಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೇವೆ” ಎಂದು ಹೇಳಿದರು. ಉಕ್ರೇನ್ ಸಂಘರ್ಷಕ್ಕೆ ಶಾಂತಿಯುತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ನಡೆಯಬೇಕು ಎಂದು ಅವರು ಪುಟಿನ್ ಅವರನ್ನು ಆಗ್ರಹಿಸಿದರು.
ಜಾಗತಿಕ ಸಂಕಷ್ಟಗಳ ಪ್ರಸ್ತಾಪ
ಕಳೆದ ಕೆಲವು ವರ್ಷಗಳಿಂದ ಜಗತ್ತು ಕೋವಿಡ್ ಸಾಂಕ್ರಾಮಿಕ, ಆರ್ಥಿಕ ಆಘಾತಗಳು ಮತ್ತು ವಿವಿಧ ಸಂಘರ್ಷಗಳಂತಹ ಅನೇಕ ಸವಾಲುಗಳನ್ನು ಎದುರಿಸಿದೆ ಎಂದು ಮೋದಿ ಸ್ಮರಿಸಿದರು. ಜಾಗತಿಕ ಸಮುದಾಯವು ಇಂತಹ ವಿಪತ್ತುಗಳಿಂದ ಶೀಘ್ರದಲ್ಲೇ ಮುಕ್ತಿ ಪಡೆಯಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ಇದೇ ವೇಳೆ ಉಭಯ ನಾಯಕರು ಉಕ್ರೇನ್ ವಿಷಯದ ಬಗ್ಗೆಯೂ ಅಭಿಪ್ರಾಯ ವಿನಿಮಯ ಮಾಡಿಕೊಂಡರು.
ಮೋದಿ ಪ್ರಯತ್ನಕ್ಕೆ ಪುಟಿನ್ ಶ್ಲಾಘನೆ
ಭಾರತದ ನಿಲುವಿಗೆ ಸ್ಪಂದಿಸಿದ ರಷ್ಯಾ ಅಧ್ಯಕ್ಷ ಪುಟಿನ್, ಭಾರತ ಮತ್ತು ರಷ್ಯಾದ ಸಂಬಂಧ ಕೇವಲ ಮಾತುಗಳಿಗೆ ಸೀಮಿತವಾಗಿಲ್ಲ, ಅದು ಕೃತಿಯಲ್ಲಿ ಆಳವಾಗಿ ಬೇರೂರಿದೆ ಎಂದು ಬಣ್ಣಿಸಿದರು. “ಉಕ್ರೇನ್‌ನಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಮತ್ತು ಶಾಂತಿಯುತ ಇತ್ಯರ್ಥಕ್ಕಾಗಿ ನಾವು ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ನಾನು ವಿವರಗಳನ್ನು ಹಂಚಿಕೊಳ್ಳಲಿದ್ದೇನೆ. ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಿಮ್ಮ (ಮೋದಿ) ವೈಯಕ್ತಿಕ ಕಾಳಜಿ ಮತ್ತು ಪ್ರಯತ್ನಗಳಿಗೆ ಧನ್ಯವಾದಗಳು” ಎಂದು ಪುಟಿನ್ ಮೆಚ್ಚುಗೆ ವ್ಯಕ್ತಪಡಿಸಿದರು. ಎರಡು ದೇಶಗಳ ನಡುವಿನ ವಿಶ್ವಾಸವನ್ನು ಎತ್ತಿ ಹಿಡಿದ ಅವರು, ದ್ವಿಪಕ್ಷೀಯ ಸಹಕಾರವನ್ನು ಮುಂದುವರಿಸುವ ಭರವಸೆ ನೀಡಿದರು.






