Home State Politics National More
STATE NEWS

Thief Arrest | ಹಾಡುಹಗಲೇ ಮನೆಯೆದುರಿಗಿದ್ದ ಸ್ಕೂಟಿ ಕದ್ದೊಯ್ದಿದ್ದ ಐನಾಯಿ ಅಂದರ್!

Yellapur bike theft case accused arrested police s
Posted By: Sagaradventure
Updated on: Dec 6, 2025 | 2:36 AM

ಯಲ್ಲಾಪುರ(ಉತ್ತರಕನ್ನಡ): ಪಟ್ಟಣದ ಕಾಳಮ್ಮನಗರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಲ್ಲಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಕಳುವಾದ ಸ್ಕೂಟಿಯನ್ನು ವಶಪಡಿಸಿಕೊಳ್ಳಲಾಗಿದೆ. ಹಳಿಯಾಳ ಕ್ರಾಸ್ ನಿವಾಸಿ, ಕೂಲಿ ಕೆಲಸ ಮಾಡುತ್ತಿದ್ದ ಪ್ರಕಾಶ್ ಇನಾಸ್ ಸಿದ್ದಿ (26) ಬಂಧಿತ ಆರೋಪಿಯಾಗಿದ್ದಾನೆ.

ಘಟನೆಯ ವಿವರ: ಪಟ್ಟಣದ ಕಾಳಮ್ಮನಗರದ ನಿವಾಸಿ, ಅಡಿಕೆ ವ್ಯಾಪಾರಿ ರಾಘವೇಂದ್ರ ಮಹಾಬಲೇಶ್ವರ ಭಟ್ಟ ಅವರು ಕಳೆದ ಅಕ್ಟೋಬರ್ 15 ರಂದು ತಮ್ಮ ಮನೆಯ ಗೇಟ್ ಎದುರು ಕಪ್ಪು ಬಣ್ಣದ ಟಿವಿಎಸ್ ಜುಪಿಟರ್ (KA-31/EF-7293) ಬೈಕ್ ನಿಲ್ಲಿಸಿದ್ದರು. ಸಂಜೆ 3:30 ರಿಂದ 5:00 ಗಂಟೆಯ ಅವಧಿಯಲ್ಲಿ ಈ ವಾಹನ ಕಳ್ಳತನವಾಗಿತ್ತು. ಈ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರಿಗೆ ಸಿಕ್ಕ ಖಚಿತ ಮಾಹಿತಿಯ ಮೇರೆಗೆ ಡಿಸೆಂಬರ್ 5 ರಂದು ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಕೂಲಂಕುಷ ವಿಚಾರಣೆ ವೇಳೆ ಆರೋಪಿ ಪ್ರಕಾಶ್, ತನ್ನ ಸಹಚರನೊಂದಿಗೆ ಸೇರಿ ಬೈಕ್ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಯಿಂದ ಕಳುವಾದ ಬೈಕ್ ಅನ್ನು ಜಪ್ತಿ ಮಾಡಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಹೆಚ್ಚುವರಿ ಎಸ್ಪಿಗಳಾದ ಕೃಷ್ಣಮೂರ್ತಿ, ಜಗದೀಶ ಎಂ., ಹಾಗೂ ಡಿವೈಎಸ್‌ಪಿ ಗೀತಾ ಪಾಟೀಲ ಅವರ ಮಾರ್ಗದರ್ಶನದಲ್ಲಿ, ಸಿಪಿಐ ರಮೇಶ ಹನಾಪುರ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ. ಪಿಎಸ್‌ಐಗಳಾದ ರಾಜಶೇಖರ ವಂದಲಿ, ಮಹಾವೀರ ಕಾಂಬಳೆ, ಶೇಡಜಿ ಚೌಹಾಣ, ಸಿದ್ದಪ್ಪ ಗುಡಿ ಹಾಗೂ ಸಿಬ್ಬಂದಿಗಳಾದ ಬಸವರಾಜ ಹಗರಿ ಮತ್ತು ಪರಮೇಶ ಅವರು ಆರೋಪಿಯನ್ನು ಸೆರೆಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಯಶಸ್ವಿ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಎಸ್‌ಪಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Shorts Shorts