ಮಂಗಳೂರು: ಭಾರತದಲ್ಲಿ ಮೊದಲ ಬಾರಿಗೆ ದಾಖಲಾದ 72 ವರ್ಷಗಳ ನಂತರ, ಅತ್ಯಂತ ಅಪರೂಪದ ‘ಬಿದಿರು ಸೀಗಡಿ’ (Atyopsis spinipes) ಪ್ರಭೇದವನ್ನು ಕರ್ನಾಟಕ ಮತ್ತು ಒಡಿಶಾದಲ್ಲಿ ಮರುಶೋಧಿಸಲಾಗಿದೆ. ಚೆನ್ನೈನ ಸತ್ಯಭಾಮ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಹವಾಮಾನ ಬದಲಾವಣೆ ಅಧ್ಯಯನ ಕೇಂದ್ರದ ಸಂಶೋಧಕರ ತಂಡ ಈ ಮಹತ್ವದ ಶೋಧನೆಯನ್ನು ಮಾಡಿದೆ. ಸೀಗಡಿ ಸಂಶೋಧನಾ ತಜ್ಞ ಡಾ. ಎಸ್. ಪ್ರಕಾಶ್, ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿನಿ ಕೆ. ಕುಂಜುಲಕ್ಷ್ಮಿ ಮತ್ತು ಮಂಗಳೂರಿನ ವಿಜ್ಞಾನಿ ಮ್ಯಾಕ್ಲಿನ್ ಆಂಟನಿ ಸ್ಯಾಂಟೋಸ್ ಅವರನ್ನೊಳಗೊಂಡ ತಂಡ ಈ ಸಾಧನೆ ಮಾಡಿದೆ.
ಅಕ್ವೇರಿಯಂ ಹವ್ಯಾಸಿಗಳಲ್ಲಿ ಜನಪ್ರಿಯವಾಗಿರುವ ಈ ಸೀಗಡಿಗಳು ಆಗ್ನೇಯ ಏಷ್ಯಾದಾದ್ಯಂತ ಕಂಡುಬರುತ್ತವೆ. ಇವು ಫಿಲ್ಟರ್ ಫೀಡರ್‌ಗಳಾಗಿದ್ದು (Filter Feeders), ತಮ್ಮ ಕಾಲುಗಳ ಮೇಲಿರುವ ಫ್ಯಾನ್‌ನಂತಹ ರಚನೆಗಳನ್ನು ಬಳಸಿ ಹರಿಯುವ ನೀರಿನಲ್ಲಿರುವ ಆಹಾರ ಕಣಗಳನ್ನು ಶೋಧಿಸಿ ತಿನ್ನುತ್ತವೆ. 2022ರಲ್ಲಿ ಒಡಿಶಾದ ಅಕ್ವೇರಿಯಂ ಹವ್ಯಾಸಿಯೊಬ್ಬರು ಈ ಪ್ರಭೇದದ ಪ್ರಬುದ್ಧ ಸೀಗಡಿಯನ್ನು ಪತ್ತೆಹಚ್ಚಿದ ನಂತರ ಸಂಶೋಧಕರು ಈ ಬಗ್ಗೆ ತೀವ್ರ ಹುಡುಕಾಟ ಆರಂಭಿಸಿದರು.
ಕರ್ನಾಟಕದಲ್ಲಿ ಈ ಸೀಗಡಿಯ ಹುಡುಕಾಟವು ಸಂಶೋಧಕರಿಗೆ ದೊಡ್ಡ ಸವಾಲಾಗಿತ್ತು. ಇವು ಉಪ್ಪು ಮತ್ತು ಸಿಹಿ ನೀರಿನಲ್ಲಿ ಬೆರೆಯುವ (Amphidromous) ಸ್ವಭಾವದಾಗಿದ್ದು, ಮರಿಗಳು ಉಪ್ಪು ನೀರಿನಲ್ಲಿ ಬೆಳೆದು ನಂತರ ಸಿಹಿ ನೀರಿಗೆ ಮರಳುತ್ತವೆ. ಹೀಗಾಗಿ ಸಂಶೋಧಕರು ಮರಳು ಮಿಶ್ರಿತ ತಳ, ಎಲೆಗಳು ಮತ್ತು ಮ್ಯಾಂಗ್ರೋವ್‌ಗಳಿರುವ ಜಾಗಗಳನ್ನು ಗುರಿಯಾಗಿಸಿಕೊಂಡು ಶೋಧ ನಡೆಸಿದರು. ಉಡುಪಿ, ಕಾರವಾರ ಮತ್ತು ಮಂಗಳೂರಿನ ವಿವಿಧೆಡೆ ಸತತ ಎರಡು ವರ್ಷಗಳ ಶೋಧನೆಯ ನಂತರ ಈ ಸೀಗಡಿಗಳು ಪತ್ತೆಯಾಗಿವೆ.
ಕುತೂಹಲಕಾರಿ ವಿಷಯವೆಂದರೆ, 72 ವರ್ಷಗಳ ಹಿಂದೆ ಇದನ್ನು ‘ಅಟಿಯೊಪ್ಸಿಸ್ ಮೊಲುಸೆನ್ಸಿಸ್’ (Atyopsis mollucensis) ಎಂದು ತಪ್ಪಾಗಿ ಗುರುತಿಸಲಾಗಿತ್ತು. ಆದರೆ ಈಗ ಸಿಕ್ಕಿರುವ ಮಾದರಿಗಳು ಮತ್ತು ಅಂಡಮಾನ್ ದ್ವೀಪದ ಮ್ಯೂಸಿಯಂ ಮಾದರಿಯನ್ನು ಪರಿಶೀಲಿಸಿದಾಗ ಇದು ‘ಅಟಿಯೊಪ್ಸಿಸ್ ಸ್ಪಿನಿಪ್ಸ್’ (spinipes) ಎಂದು ದೃಢಪಟ್ಟಿದೆ. ಈ ಪ್ರಭೇದದ ಮರಿಗಳು ಉಪ್ಪು ಮತ್ತು ತಾಪಮಾನದ ಬದಲಾವಣೆಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿವೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಸೇತುವೆ ನಿರ್ಮಾಣ, ಮರಳುಗಾರಿಕೆ ಮತ್ತು ಮಾನವ ಹಸ್ತಕ್ಷೇಪಗಳಿಂದ ನದಿ ಮತ್ತು ಸರೋವರಗಳಿಗೆ ಕಂಟಕ ಎದುರಾಗಿರುವ ಇಂದಿನ ದಿನಗಳಲ್ಲಿ, ಇಂತಹ ದಾಖಲಾಗದ ಪ್ರಭೇದಗಳು ಇನ್ನೂ ಇವೆ ಎಂಬುದನ್ನು ಈ ಶೋಧನೆ ಸೂಚಿಸುತ್ತದೆ. ಆದರೆ ಅಕ್ವೇರಿಯಂ ಮಾರುಕಟ್ಟೆಯಲ್ಲಿ ಇವುಗಳಿಗೆ 350 ರಿಂದ 600 ರೂ. ವರೆಗೆ ಬೆಲೆಯಿದ್ದು, ಇವುಗಳನ್ನು ಸೆರೆಹಿಡಿಯುವುದು ಆತಂಕಕಾರಿ ವಿಷಯವಾಗಿದೆ. ಏಕೆಂದರೆ ಇತರ ಜನಪ್ರಿಯ ಸೀಗಡಿಗಳಂತೆ ಇವುಗಳನ್ನು ಕೃತಕವಾಗಿ ತೊಟ್ಟಿಯಲ್ಲಿ ಬೆಳೆಸುವುದು (Breeding) ಕಷ್ಟಸಾಧ್ಯ ಎಂದು ತಜ್ಞರು ಎಚ್ಚರಿಸಿದ್ದಾರೆ.






