ಬೆಂಗಳೂರು: ಮನೆಯ ಕೆಲಸದವರು ನಂಬಿಗಸ್ಥರು ಎಂದು ಭಾವಿಸಿ ಕೆಲಸಕ್ಕೆ ಸೇರಿಸಿಕೊಂಡಿದ್ದ ವೈದ್ಯೆಯೊಬ್ಬರಿಗೆ, ಆ ಕೆಲಸದವರೇ ಅರಿವಳಿಕೆ ಮದ್ದು (Drugs) ನೀಡಿ ಚಿನ್ನಾಭರಣ ದೋಚಿ ಪರಾರಿಯಾದ ಆಘಾತಕಾರಿ ಘಟನೆ ಪಶ್ಚಿಮ ಬೆಂಗಳೂರಿನ ಭಾರತ್ ನಗರದಲ್ಲಿ ನಡೆದಿದೆ. 54 ವರ್ಷದ ಸ್ತ್ರೀರೋಗ ತಜ್ಞೆ ಡಾ. ಲಲಿತಾ ಅವರು ಈ ಕೃತ್ಯಕ್ಕೆ ಬಲಿಯಾದವರಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ನಡೆದ ಡಿ.2 ರಂದು, ಡಾ. ಲಲಿತಾ ಅವರ ಪುತ್ರ ನಿಖಿಲ್ ಜ್ವರದ ಕಾರಣ ಮಾತ್ರೆ ಸೇವಿಸಿ ಸಂಜೆ 6.30 ರ ಸುಮಾರಿಗೆ ಗಾಢ ನಿದ್ರೆಗೆ ಜಾರಿದ್ದರು. ಇದನ್ನೇ ಕಾಯುತ್ತಿದ್ದ ನೇಪಾಳಿ ಮೂಲದ ಕೆಲಸದವರು, ವೈದ್ಯೆಗೆ ಮಾದಕ ದ್ರವ್ಯ ನೀಡಿ ಪ್ರಜ್ಞೆ ತಪ್ಪಿಸಿದ್ದಾರೆ. ನಂತರ ಮನೆಯಲ್ಲಿದ್ದ 50 ಗ್ರಾಂ ತೂಕದ ಮಾಂಗಲ್ಯ ಸರ, 20 ಗ್ರಾಂ ಚಿನ್ನದ ಬಳೆಗಳು, ನಗದು ಹಾಗೂ ಮೊಬೈಲ್ ಫೋನ್ ದೋಚಿದ್ದಾರೆ. ಮರುದಿನ ಬೆಳಿಗ್ಗೆ 7.30ಕ್ಕೆ ನಿಖಿಲ್ ಎದ್ದು ನೋಡಿದಾಗ, ತಾಯಿ ಬೆಡ್‌ರೂಮ್ ಬಾಗಿಲ ಬಳಿ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿರುವುದು ಕಂಡುಬಂದಿದೆ.
ಕೃತ್ಯ ಎಸಗಿದ ಬಿಪೇಂದ್ರ ಮತ್ತು ಆತನ ಪತ್ನಿ ಮನೆಯ ಗ್ರೌಂಡ್ ಫ್ಲೋರ್‌ನಲ್ಲೇ ವಾಸವಿದ್ದರು. ಕೇವಲ ಒಂದು ತಿಂಗಳ ಹಿಂದಷ್ಟೇ ಮಧ್ಯವರ್ತಿಯೊಬ್ಬರ ಮೂಲಕ ಇವರನ್ನು ಕೆಲಸಕ್ಕೆ ನೇಮಿಸಿಕೊಳ್ಳಲಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಅಂದು ರಾತ್ರಿ 8.30 ರ ಸುಮಾರಿಗೆ ಬಿಪೇಂದ್ರ ತನ್ನ ಸಹಚರರೊಂದಿಗೆ ಮನೆಗೆ ಪ್ರವೇಶಿಸಿ, ರಾತ್ರಿ 10.45 ರ ಸುಮಾರಿಗೆ ಲೂಟಿ ಮಾಡಿದ ವಸ್ತುಗಳೊಂದಿಗೆ ಪರಾರಿಯಾಗಿರುವುದು ದಾಖಲಾಗಿದೆ.
ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. “ಮನೆ ಕೆಲಸದವರನ್ನು ನೇಮಿಸಿಕೊಳ್ಳುವಾಗ ಅವರ ಪೂರ್ವಾಪರ ತಿಳಿಯದೇ, ಸರಿಯಾದ ದಾಖಲೆಗಳನ್ನು ಪಡೆಯದೇ ಇರುವುದು ಇಂತಹ ಘಟನೆಗಳಿಗೆ ಕಾರಣವಾಗುತ್ತದೆ. ಮಾಲೀಕರು ಎಚ್ಚರದಿಂದಿರಬೇಕು” ಎಂದು ಡಿಸಿಪಿ (ವಾಯುವ್ಯ) ಡಿ.ಎಲ್.ನಾಗೇಶ್ ಎಚ್ಚರಿಸಿದ್ದಾರೆ.






