ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರಖ್ಯಾತ ಬಿರಿಯಾನಿ ಹೋಟೆಲ್ ಜಾಲವಾದ ‘ಮೇಘನಾ ಫುಡ್ಸ್’ (Meghana Foods) ಹಾಕಿರುವ ಸೂಚನಾ ಫಲಕವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. “ಸ್ವಿಗ್ಗಿ ಮತ್ತು ಜೊಮ್ಯಾಟೋ ಡೆಲಿವರಿ ಬಾಯ್ಸ್‌ಗಳಿಗೆ ಲಿಫ್ಟ್ ಪ್ರವೇಶವಿಲ್ಲ. ದಯವಿಟ್ಟು ಮೆಟ್ಟಿಲುಗಳನ್ನು ಬಳಸಿ” ಎಂದು ಹೋಟೆಲ್ ಆವರಣದಲ್ಲಿ ಹಾಕಲಾಗಿರುವ ಬೋರ್ಡ್‌ನ ಫೋಟೋ ವೈರಲ್ ಆಗಿದ್ದು, ಹೋಟೆಲ್ ಆಡಳಿತ ಮಂಡಳಿಯ ಈ ತಾರತಮ್ಯದ ನೀತಿಗೆ ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ.
ಅಮಾನವೀಯ ನಡೆಗೆ ವಿರೋಧ:
ಬೆಂಗಳೂರಿನ ಟ್ರಾಫಿಕ್ ಜಂಜಾಟದ ನಡುವೆ, ಬಿಸಿಲು ಮಳೆ ಎನ್ನದೆ ಇಡೀ ದಿನ ಓಡಾಡಿ ಗ್ರಾಹಕರಿಗೆ ಆಹಾರ ತಲುಪಿಸುವ ಡೆಲಿವರಿ ಸಿಬ್ಬಂದಿಗೆ ಕನಿಷ್ಠ ಲಿಫ್ಟ್ ಬಳಸಲೂ ಬಿಡದಿರುವುದು ಅಮಾನವೀಯ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ನಗರದ ಪ್ರಮುಖ ಪ್ರದೇಶಗಳಾದ ಕೋರಮಂಗಲ, ಜಯನಗರ, ಇಂದಿರಾನಗರ ಮುಂತಾದ ಕಡೆ ಶಾಖೆಗಳನ್ನು ಹೊಂದಿರುವ ಹೋಟೆಲ್, ಶ್ರಮಜೀವಿಗಳಿಗೆ ಗೌರವ ನೀಡುತ್ತಿಲ್ಲ ಎಂದು ಜನರು ಬೇಸರ ವ್ಯಕ್ತಪಡಿಸಿದ್ದಾರೆ.
ಗ್ರಾಹಕರಷ್ಟೇ ಸಮಾನರು:
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಲೋಕೇಶ್ ಶಂಕರ್ ಎಂಬುವವರು, “ನಿಮ್ಮಲ್ಲಿಗೆ ಆರ್ಡರ್ ಪಿಕ್ ಮಾಡಲು ಬರುವವರು ಗ್ರಾಹಕರೇ ಆಗಿರಲಿ ಅಥವಾ ಡೆಲಿವರಿ ಏಜೆಂಟ್ ಆಗಿರಲಿ, ಅವರೆಲ್ಲರೂ ನಿಮ್ಮ ಗ್ರಾಹಕರ ವಿಸ್ತರಣೆಯೇ (Extension of Customer). ಡೆಲಿವರಿ ಬಾಯ್ಸ್ ನಿಮ್ಮ ಸೇವೆಯ ಪ್ರಮುಖ ಕೊಂಡಿ. ಅವರಿಗೆ ನೀವು ನೇರ ಗ್ರಾಹಕರಿಗೆ ನೀಡುವಷ್ಟೇ ಗೌರವ, ಸೌಜನ್ಯ ಮತ್ತು ವೃತ್ತಿಪರತೆಯನ್ನು ತೋರಬೇಕು” ಎಂದು ಸಲಹೆ ನೀಡಿದ್ದಾರೆ.






