ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದ ಬಳಿ ಬರುವ ಫರ್ನಿಚರ್ ಅಂಗಡಿಯೊಂದರಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಅಂಗಡಿಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಪೀಠೋಪಕರಣಗಳು ಬೆಂಕಿಗಾಹುತಿಯಾಗಿವೆ.
ಈ ಅಗ್ನಿ ಅನಾಹುತದಿಂದಾಗಿ ಸುಮಾರು 50 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಬೆಂಕಿಯ ತೀವ್ರತೆ ಎಷ್ಟಿತ್ತೆಂದರೆ, ಫರ್ನಿಚರ್ ಅಂಗಡಿಯ ಪಕ್ಕದಲ್ಲೇ ಇದ್ದ ಹಾರ್ಡ್‌ವೇರ್ ಗೋಡೌನ್‌ಗೂ ಬೆಂಕಿ ವ್ಯಾಪಿಸಿದ್ದು, ಅಲ್ಲಿಯೂ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಕಣ್ಣ ಎದುರೇ ತಮ್ಮ ಜೀವನದ ಆದಾಯ ಮೂಲವಾಗಿದ್ದ ಅಂಗಡಿ ಸುಟ್ಟು ಬೂದಿಯಾಗಿದ್ದನ್ನು ಕಂಡು ಅಂಗಡಿ ಮಾಲೀಕರು ಕಂಗಾಲಾಗಿದ್ದಾರೆ.
ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.






