ಬೆಂಗಳೂರು: ಸಾಲದ ಬಾಧೆ ತಾಳಲಾರದೆ ಬೆಂಗಳೂರಿನಲ್ಲಿ ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಸಾಮೂಹಿಕ ಆತ್ಮಹ*ತ್ಯೆ (Suicide) ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.
ಕೋರಮಂಗಲ (Koramangala) ಸಮೀಪದ ತಾವರೇಕೆರೆ 2ನೇ ಕ್ರಾಸ್‌ನಲ್ಲಿ ಘಟನೆ ನಡೆದಿದೆ. ಮೃತಪಟ್ಟವರನ್ನು ಅಜ್ಜಿ ಮಾದಮ್ಮ (68), ಮಗಳು ಸುಧಾ (38) ಮತ್ತು ಮೊಮ್ಮಗ ಮೋನಿಷ್ (14) ಎಂದು ಗುರುತಿಸಲಾಗಿದೆ. ಮೋನಿಷ್ ಸ್ಥಳೀಯ ಕ್ರೈಸ್ಟ್ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದ.
ಕುಟುಂಬವು ಮೊದಲು ಬಿರಿಯಾನಿ ಮತ್ತು ಚಿಪ್ಸ್ ವ್ಯಾಪಾರ ಮಾಡುತ್ತಿತ್ತು. ಎರಡರಲ್ಲೂ ನಷ್ಟ ಉಂಟಾಗಿ ಸಾಲವಾಗಿತ್ತು. ನಂತರ ಅಜ್ಜಿ ಮಾದಮ್ಮ ಮತ್ತು ಮಗಳು ಸುಧಾ ಅವರು ಹಾಲು ವ್ಯಾಪಾರ (Milk Business) ಹಾಗೂ ಮನೆ ಕೆಲಸಕ್ಕೆ ಹೋಗುತ್ತಿದ್ದರು. ತೀರಾ ಹೆಚ್ಚು ಸಾಲವಾದ ಹಿನ್ನೆಲೆಯಲ್ಲಿ ಮನನೊಂದು ಈ ನಿರ್ಧಾರಕ್ಕೆ ಬಂದಿದ್ದಾರೆ.
ಬೆಳಗ್ಗೆ 9 ಗಂಟೆ ಸುಮಾರಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸದ್ದುಗುಂಟೆಪಾಳ್ಯ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಡಿಸಿಪಿ ಸಾರಾ ಫಾತೀಮಾ (DCP Sara Fathima) ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುಟುಂಬ ಮೂಲತಃ ತಮಿಳುನಾಡಿನ (Tamil Nadu) ಧರ್ಮಪುರಿ ಮೂಲದವರಾಗಿದ್ದು, ಒಂದೂವರೆ ವರ್ಷದಿಂದ ಈ ಮನೆಯಲ್ಲಿ ಬಾಡಿಗೆಗೆ ಇದ್ದರು. ನಿನ್ನೆ ರಾತ್ರಿ ದೇವಸ್ಥಾನದಿಂದ ಬಂದು ತಮ್ಮ ತಂಗಿಯ ಬಳಿಯೂ ಮಾತನಾಡಿದ್ದಾರೆ. ನಂತರ ಮೊಮ್ಮಗನನ್ನು ಕೊಂದು ತಾಯಿ ಮತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾಲದ ಕಾರಣಕ್ಕೆ ಈ ದುರಂತ ನಡೆದಿದೆಯೇ ಅಥವಾ ಬೇರೆ ಕಾರಣ ಇದೆಯೇ ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತೀಮಾ ಅವರು ಹೇಳಿದ್ದಾರೆ.






