ಕಾರವಾರ: “ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾದ ಕಟ್ಟಡಕ್ಕೆ ಕಾಂಗ್ರೆಸ್ ಸರ್ಕಾರ ಅಗತ್ಯ ವೈದ್ಯಕೀಯ ಸೌಲಭ್ಯ ಒದಗಿಸದೇ ಉದ್ಘಾಟನೆಗೆ ಮುಂದಾಗುತ್ತಿರುವುದು ಸರಿಯಲ್ಲ” ಎಂದು ಮಾಜಿ ಶಾಸಕಿ ರೂಪಾಲಿ ನಾಯ್ಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ರಿಮ್ಸ್ ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟನೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಕಾರವಾರದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಪತ್ರಿಕಾಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ಆಡಳಿತಾವಧಿಯಲ್ಲಿ ಕಾರವಾರ ಮತ್ತು ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಒತ್ತು ನೀಡಲಾಗಿತ್ತು. ಕಾರವಾರದಲ್ಲಿ 450 ಬೆಡ್‌ಗಳ ಆಸ್ಪತ್ರೆಗೆ 150 ಕೋಟಿ ರೂ. ಅನುದಾನ ನೀಡಿ ಕಟ್ಟಡ ನಿರ್ಮಿಸಿದ್ದು ಬಿಜೆಪಿ ಸರ್ಕಾರ. ಅಂದು ಶಿವರಾಮ್ ಹೆಬ್ಬಾರ್ ಉಸ್ತುವಾರಿ ಸಚಿವರಾಗಿದ್ದಾಗ ಆಸ್ಪತ್ರೆಗೆ 30 ಕೋಟಿ ಅನುದಾನ ಬಿಡುಗಡೆಗೆ ಆದೇಶವಾಗಿತ್ತು. ಆದರೆ, ಇಂದು ಕಾಂಗ್ರೆಸ್ ನಾಯಕರು ಬಿಜೆಪಿ ತಂದ ಅನುದಾನಕ್ಕೆ ತಮ್ಮ ಹೆಸರಿನ ಲೇಬಲ್ ಹಚ್ಚಿಕೊಳ್ಳುತ್ತಿದ್ದಾರೆ. ತಾಕತ್ತಿದ್ದರೆ ಈಗಿನ ಸರ್ಕಾರ ಬಿಡುಗಡೆ ಮಾಡಿದ ಅನುದಾನದ ದಾಖಲೆ ನೀಡಲಿ ಎಂದು ಸವಾಲು ಹಾಕಿದರು.
ಕಟ್ಟಡವಿದ್ದರೂ ವ್ಯವಸ್ಥೆ ಸರಿಯಿಲ್ಲ. ನ್ಯೂರೋ ಸರ್ಜನ್, ಹಾರ್ಟ್ ಸ್ಪೆಷಲಿಸ್ಟ್, ಡಯಾಲಿಸಿಸ್ ಯಂತ್ರಗಳು ಹಾಗೂ ಎಂಆರ್‌ಐ ಸ್ಕ್ಯಾನಿಂಗ್ ಮಷಿನ್ ಇಲ್ಲದೇ ಆಸ್ಪತ್ರೆ ಸೊರಗಿದೆ. ಕಳೆದ ಎರಡು ವರ್ಷಗಳಲ್ಲಿ ಒಂದು ಎಂಆರ್‌ಐ ಮಷಿನ್ ತರಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಬಡವರು ಸೂಕ್ತ ಚಿಕಿತ್ಸೆ ಸಿಗದೇ ಆಂಬ್ಯುಲೆನ್ಸ್‌ಗಳಲ್ಲಿ ಬೇರೆ ಊರಿಗೆ ಹೋಗುವಾಗ ದಾರಿಯಲ್ಲೇ ಪ್ರಾಣ ಬಿಡುತ್ತಿದ್ದಾರೆ. ಬಡವರ ಕಣ್ಣೀರು ಮತ್ತು ಶಾಪ ಈ ಸರ್ಕಾರಕ್ಕೆ ತಟ್ಟದೇ ಬಿಡಲ್ಲ ಎಂದು ರೂಪಾಲಿ ನಾಯ್ಕ ಬೇಸರ ವ್ಯಕ್ತಪಡಿಸಿದರು.
ಹಾಲಕ್ಕಿ ಸಮುದಾಯಕ್ಕೆ ಮೀಸಲಿಟ್ಟಿದ್ದ 3 ಕೋಟಿ, ವೈಷ್ಯ ಸಮುದಾಯದ 6 ಕೋಟಿ ಹಾಗೂ ಮಾಲಾದೇವಿ ಮೈದಾನಕ್ಕೆ ಮೀಸಲಿಟ್ಟಿದ್ದ 8 ಕೋಟಿ ರೂ. ಅನುದಾನವನ್ನು ಈ ಸರ್ಕಾರ ಬೇರೆಡೆಗೆ ವರ್ಗಾಯಿಸಿದೆ ಎಂದು ಆರೋಪಿಸಿದ ಅವರು, ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಇಲಾಖೆಗಳ ಅನುದಾನವನ್ನು ಬಳಸಿಕೊಳ್ಳಲಾಗುತ್ತಿದೆ. ರಸ್ತೆ ಗುಂಡಿ ಮುಚ್ಚಲೂ ಹಣವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ನಮ್ಮ ಅವಧಿಯಲ್ಲಿ ತಂದಿದ್ದ 350 ಕೋಟಿ ರೂ. ಉಳಿದ ಹಣ ಏನಾಯಿತು? ಈಗ ನಡೆಯುತ್ತಿರುವ ಕಾಮಗಾರಿಗಳಲ್ಲಿ ಕಮಿಷನ್ ಹೊಡೆಯುತ್ತಿರುವವರು ಯಾರು? ಎಂದು ಪ್ರಶ್ನಿಸಿದರು.
ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ್ ಕೋಣೆಮನೆ ಮಾತನಾಡಿ, ಜಿಲ್ಲೆಯ ಜನತೆಗೆ ಉತ್ತಮ ಆರೋಗ್ಯ ಸೇವೆ ಸಿಗಬೇಕು ಎಂಬುದು ನಮ್ಮ ಉದ್ದೇಶ. ಹಿಂದೆ ಇದ್ದ ವೈದ್ಯರನ್ನು ವರ್ಗಾವಣೆ ಮಾಡದಂತೆ ನಾವು ಹೋರಾಟ ಮಾಡಿದ್ದೆವು. ಆದರೆ ಅವರನ್ನು ವರ್ಗಾವಣೆ ಮಾಡಿದ ಸರ್ಕಾರ, ಆ ಜಾಗಕ್ಕೆ ಬೇರೆ ವೈದ್ಯರನ್ನು ನೇಮಿಸಿಲ್ಲ. ಸಿಎಂ ಬಂದು ಉದ್ಘಾಟನೆ ಮಾಡಿ ಹೋಗುವುದಲ್ಲ, ಜನರಿಗೆ ಮೋಸವಾಗದಂತೆ ಮೊದಲು ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ನಿಕಟಪೂರ್ವ ಜಿಲ್ಲಾಧ್ಯಕ್ಷ ಕೆ.ಜೆ.ನಾಯ್ಕ ಮಾತನಾಡಿ, ಜನರಿಗೆ ಕಡಿಮೆ ದರದಲ್ಲಿ ಔಷಧ ಸಿಗಬೇಕೆಂದು ಕೇಂದ್ರ ಸರ್ಕಾರ ಜನೌಷಧ ಕೇಂದ್ರಗಳನ್ನು ತಂದರೆ, ರಾಜ್ಯ ಸರ್ಕಾರ ದುರುದ್ದೇಶದಿಂದ ಅವುಗಳನ್ನು ಮುಚ್ಚಿಸುವ ಕೆಲಸ ಮಾಡುತ್ತಿದೆ. ರಾಜಕೀಯ ಕಾರಣಕ್ಕೆ ಕೇಂದ್ರದ ಯೋಜನೆಗಳಿಗೆ ಅಡ್ಡಿಪಡಿಸುತ್ತಿದೆ. ಅಷ್ಟಿದ್ದರೆ ಜಿಲ್ಲೆಯ ನಾಲ್ವರು ಕಾಂಗ್ರೆಸ್ ಶಾಸಕರು ಸಿಎಂ ಭೇಟಿಯಾಗಿ ಅಗತ್ಯ ಯೋಜನೆಗಳಿಗೆ ಅನುದಾನ ತರುವ ಕೆಲಸ ಮಾಡಲಿ ಎಂದು ಆಗ್ರಹಿಸಿದರು.
ಇದೇ ವೇಳೆ ಕೆಣಿ ಭಾಗದಲ್ಲಿ ಜನರಿಗೆ ಮಾಹಿತಿ ನೀಡದೇ ಸರ್ವೆ ನಡೆಸುತ್ತಿರುವುದಕ್ಕೂ ನಾಯಕರು ವಿರೋಧ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯಕ, ನಗರಾಧ್ಯಕ್ಷ ನಾಗೇಶ ಕುರ್ಡೇಕರ್, ಸುಭಾಷ ಗುನಗಿ, ರವಿರಾಜ ಅಂಕೋಲೆಕರ್, ಸಂಜಯ ಸಾಳುಂಕೆ, ಸುಜಾತಾ ಬಾಂದೇಕರ್, ಅಶೋಕ ಗೌಡ, ದೇವಿದಾಸ್ ಕಂತ್ರೆಕರ್ ಮತ್ತಿತರರು ಉಪಸ್ಥಿತರಿದ್ದರು.






