ಮೈಸೂರು : ರಿಯಲ್ ಎಸ್ಟೇಟ್ (Real Estate) ಉದ್ಯಮಿ ಲೋಕೇಶ್ ಅವರನ್ನು ತಡರಾತ್ರಿ ಕಿಡ್ನಾಪ್ (Kidnap) ಮಾಡಿದ್ದ ಪ್ರಕರಣವನ್ನು ಮೈಸೂರು ಪೊಲೀಸರು ಕೇವಲ 4 ಗಂಟೆಗಳಲ್ಲಿ ಭೇದಿಸಿದ್ದಾರೆ. ಸಿನಿಮೀಯ (Filmy Style) ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಉದ್ಯಮಿಯನ್ನು ರಕ್ಷಿಸಿದ್ದಾರೆ.
ತಡರಾತ್ರಿ ವಿಜಯನಗರದ (Vijayanagara) ಹೆರಿಟೇಜ್ ಕ್ಲಬ್ (Heritage Club) ಬಳಿ ರಿಯಲ್ ಎಸ್ಟೇಟ್ ಉದ್ಯಮಿ ಲೋಕೇಶ್ (Lokesh) ಅವರನ್ನು ಟಾಟಾ ಸುಮೋದಲ್ಲಿ (Tata Sumo) ಬಂದಿದ್ದ ಐವರು ಆರೋಪಿಗಳು (Five Accused) ಅಪಹರಿಸಿದ್ದರು.
ಕಿಡ್ನಾಪರ್ಸ್‌ಗಳು ಉದ್ಯಮಿ ಲೋಕೇಶ್ ಅವರ ಮೊಬೈಲ್‌ನಿಂದ ಪತ್ನಿಗೆ ಕರೆ ಮಾಡಿ, ಬಿಡುಗಡೆಗೆ ಪ್ರತಿಯಾಗಿ ₹30 ಲಕ್ಷಕ್ಕೆ (30 Lakhs) ಬೇಡಿಕೆ ಇಟ್ಟಿದ್ದರು. ಲೋಕೇಶ್ ಅವರ ಪತ್ನಿ ತಕ್ಷಣ ವಿಜಯನಗರ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ತಕ್ಷಣ ಅಲರ್ಟ್ ಆಗಿ ಕಾರ್ಯಾಚರಣೆ ಆರಂಭಿಸಿದರು.
ಆರೋಪಿಗಳು ಕಳೆದ 15 ದಿನಗಳಿಂದ ಲೋಕೇಶ್ ಅವರನ್ನು ಫಾಲೋ (Follow) ಮಾಡುತ್ತಿದ್ದರು ಮತ್ತು ಕ್ಲಬ್‌ಗೆ ಹೋಗಿ ವಾಪಸ್ ಬರುವ ಸಮಯ ನೋಡಿ ಕಿಡ್ನಾಪ್ ಮಾಡಿದ್ದಾರೆ ಎನ್ನಲಾಗಿದೆ. ಸಿಸಿಟಿವಿ ದೃಶ್ಯಾವಳಿ (CCTV Footage) ಸಹ ಲಭ್ಯವಾಗಿದೆ.
4 ಗಂಟೆಯ ಕಾರ್ಯಾಚರಣೆ
ಉದ್ಯಮಿಯ ಅಪಹರಣದ ಮಾಹಿತಿ ಸಿಕ್ಕ ಕೆಲವೇ ಗಂಟೆಗಳಲ್ಲಿ, ಪೊಲೀಸರು ಚುರುಕಾಗಿ ಕಾರ್ಯನಿರ್ವಹಿಸಿ ಕೇವಲ 4 ಗಂಟೆಗಳಲ್ಲಿ ಆರೋಪಿಗಳನ್ನು ಹೆಡೆಮುರಿಕಟ್ಟಿದ್ದಾರೆ. ಮೈಸೂರಿನಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿ ಆರೋಪಿಗಳನ್ನ ಬಂಧಿಸಿ, ಅಪಹರಣಕ್ಕೊಳಗಾಗಿದ್ದ ಉದ್ಯಮಿ ಲೋಕೇಶ್ ಅವರನ್ನು ರಕ್ಷಿಸಲಾಗಿದೆ.






